ನಾಗರಮಠ ಸೀತಾನದಿ ತಟದಲ್ಲಿ ಅಕ್ರಮ ಮರಳುಗಾರಿಕೆ: ಜಿಲ್ಲಾಡಳಿತದ ವಿರುದ್ದ ಎ.13ರಿಂದ ಪ್ರತಿಭಟನೆ
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ನಾಗರಮಠ ಎಂಬಲ್ಲಿ ಸೀತಾನದಿ ಪಾತ್ರದಲ್ಲಿ ಅಕ್ರಮ ಮರಳುಗಾರಿಕೆಗೆ ಅನುಮತಿ ನೀಡುವ ಮೂಲಕ ಜಿಲ್ಲಾಡಳಿತವು ಅಕ್ರಮಗಳಲ್ಲಿ ಶಾಮೀಲಾಗಿದೆ ಎಂದು ದಿನೇಶ್ ಗಾಣಿಗ ಆರೋಪಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೊಸಾಳ ಗ್ರಾಮದ ನಾಗರಮಠ ಎಂಬಲ್ಲಿ ಸೀತಾನದಿಯಲ್ಲಿ ಮರಳು ದಿಬ್ಬ ತೆರವಿಗಾಗಿ 1ಲಕ್ಷದ 13 ಸಾವಿರ ಮೆಟ್ರಿಕ್ ಟನ್ ಮರಳು ತೆಗೆಯಲು ಜಿಲ್ಲಾಡಳಿತವು ಕುಶ ಕುಮಾರ್ ಎಂಬವರಿಗೆ ಜನರಲ್ ಟೆಂಡರ್ ನೀಡಿದೆ. ಆದರೆ ನದಿ ಪಾತ್ರದಲ್ಲಿ ಅಷ್ಟು ಪ್ರಮಾಣದ ಮರಳು ಇಲ್ಲ ಎಂದು ನಿವೃತ್ತ ಪ್ರೊಫೆಸರ್ ಮುಖಾಂತರ ಅಧ್ಯಯನ ನಡೆಸಿ ವರದಿ ನೀಡಿದರೂ ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.
ಪರಿಸರ ವಿಮೋಚನಾ ಪತ್ರದಲ್ಲಿ ಒಂದು ಮೀಟರ್ ಒಳಗಿನ ಮರಳನ್ನು ಮಾತ್ರ ತೆರವುಗೊಳಿಸಬೇಕು ಎಂದು ಆದೇಶ ಇದ್ದರೂ ಕೂಡ ಮೂರು ಮೀಟರ್, ನಾಲ್ಕು ಮೀಟರ್ ಆಳದಲ್ಲಿ ಮರಳು ತೆಗೆಯುತ್ತಿದ್ದಾರೆ. ಹೀಗಾಗಿ ಈ ಭಾಗದ ಅದೆಷ್ಟೋ ಕೃಷಿ ಭೂಮಿಗಳಿಗೆ ಹಾನಿಯಾಗಿದೆ. ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಕೂಡಾ, ಈವರೆಗೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಮಹಜರು ನಡೆಸಿಲ್ಲ. ಭೂ ಸವಕಳಿಯ ಸ್ಥಳದಲ್ಲಿ ಮರಳುಗಾರಿಕೆ ಮಾಡಬಾರದು ಎಂದು ಆದೇಶ ಇದ್ದರೂ ವಾಸ್ತವವಾಗಿ ಸೀತಾನದಿಯ ಎರಡೂ ದಂಡೆಯಲ್ಲಿ ಮರಳುಗಾರಿಕೆಯಿಂದ ಕೃಷಿ ಭೂಮಿಗಳು ನಾಶವಾಗಿವೆ. ಜಿಲ್ಲಾಧಿಕಾರಿಗಳು ಹೂಳೆತ್ತುವ ಹೆಸರಿನಲ್ಲಿ ಮರಳು ದಂಧೆ ಮಾಡುವವರಿಗೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದರು.
ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಕೋರ್ಟ್ಗೆ ಹೋಗಿ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಈ ಬಗ್ಗೆ ಸ್ಥಳೀಯರು ಸೇರಿ ಪ್ರತಿಭಟನೆ ಮಾಡಿದರೆ ಪೊಲೀಸ್ ಇಲಾಖೆ ಮೂಲಕ ಕೇಸ್ ಹಾಕಿಸುತ್ತಾರೆ. ಅಕ್ರಮ ಮರಳುಗಾರಿಕೆಗೆ ಜಿಲ್ಲಾಡಳಿತ ಕುಮ್ಮಕ್ಕು ನೀಡುತ್ತಿದ್ದು, ಕಾನೂನಿಗೆ ಬೆಲೆ ಕೊಡಿವುದಿಲ್ಲ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿಗಳು ಅಧಿಕಾರವನ್ನುದುರ್ಬಳಕೆ ಮಾಡಿಕೊಂಡಿದ್ದಾರೆ. ಶಾಸಕರು ಸಂಸದರು ಸುಮ್ಮನಿದ್ದಾರೆ. ಹೊಸಾಳ ಭಾಗದ ಜನರ ಸಮಸ್ಯೆಗೆ ಸ್ಪಂಧಿಸುವಂತೆ ಆಗ್ರಹಿಸಿ ಎ. 13 ಮತ್ತು 14ರಂದು ಸೀತಾನದಿ ತಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಇದಕ್ಕೆ ಸೂಕ್ತ ಸ್ಪಂಧನೆ ಸಿಗದೇ ಹೋದಲ್ಲಿ ಎ. 15ರಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಚಂದ್ರ ಕಾಂಚನ್, ಕೃಷ್ಣ ಬಂಗೇರಾ, ಗಿರಿಜಾ ರಂಗ ಮರಕಾಲ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.
