ಉದ್ಯಮಿ ಸುದೀಪ್ ಆತ್ಮಹತ್ಯೆ ಪ್ರಕರಣ: ಪತ್ನಿ ಸೌಮ್ಯ ಶೆಟ್ಟಿ ಬಂಧನ
ನವ ವಿವಾಹಿತ ಸುದೀಪ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳದ ಸೌಮ್ಯ ಶೆಟ್ಟಿ ಬಂಧಿತ ಆರೋಪಿ. ಮೃತ ಸುದೀಪ್ ತಂದೆ ಬಿ. ದಾಮೋದರ ಅವರು ನೀಡಿದ ದೂರಿನಲ್ಲಿ, ಸುದೀಪ್ ಫೆಬ್ರವರಿ 17ರಂದು ಪುತ್ತೂರು ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ಕುಕ್ಕುಂದೂರು ಹಿಮ್ಮುಂಜೆ ಕಜೆ ನಿವಾಸಿ ಸೌಮ್ಯ ಶೆಟ್ಟಿ ಅವರೊಂದಿಗೆ ವಿವಾಹವಾಗಿದ್ದರು. ಬಳಿಕ ದಂಪತಿ ಕಾರ್ಕಳ ತಾಲೂಕಿನ ಜೋಡುರಸ್ತೆ ಸಮೀಪದ ಬಂಗ್ಲೆಗುಡ್ಡೆ ಕಜೆ ಪ್ರದೇಶದಲ್ಲಿ ವಾಸವಾಗಿದ್ದರು. ಮಾರ್ಚ್ 17ರಂದು ಸುದೀಪ್ ತಮ್ಮ ತಾಯಿಯೊಂದಿಗೆ ಪೂಜಾ ಕಾರ್ಯಕ್ರಮದ ನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ವೇಳೆ, ನೆಲ್ಯಾಡಿ ಪೇಟೆ ಸಮೀಪ ಸೌಮ್ಯ ಶೆಟ್ಟಿ ಸ್ಕೂಟಿಯಲ್ಲಿ ಬಂದು ಕಾರಿಗೆ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದಾದ ಬಳಿಕ ಮಾರ್ಚ್ 22ರಂದು ಸೌಮ್ಯ ಶೆಟ್ಟಿ ಅವರ ಸಂಬಂಧಿಕರಿಗೆ ಕರೆ ಮಾಡಿ, ಸುದೀಪ್ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದು, ಕಾರ್ಕಳದ ನಿಟ್ಟೆ ಗಾಜ್ರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾಳೆ. ನಂತರ ಸುದೀಪ್ ಅವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಹಾಗೂ ಬಳಿಕ ಮಂಗಳೂರು ಯೆನಪೋಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಬೆಳಗಿನ ಜಾವ ಮೃತಪಟ್ಟಿದ್ದಾರೆ. ಸುದೀಪ್‌ಗೆ ಪತ್ನಿ ಮಾನಸಿಕ ಹಿಂಸೆ ನೀಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಏಪ್ರಿಲ್ 1ರಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕರಣದ ತನಿಖೆಯನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್ ಅವರಿಗೆ ವಹಿಸಿದ್ದರು. ಅವರು ಪ್ರಾಥಮಿಕ ತನಿಖೆ ನಡೆಸಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಆರೋಪಿತೆ ಸೌಮ್ಯ ಶೆಟ್ಟಿಯನ್ನು ಏಪ್ರಿಲ್ 11ರಂದು ಬಂಧಿಸಿದ್ದಾರೆ.
ಬಂಧಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ತನಿಖೆ ಮುಂದುವರಿದಿದೆ.