ಉಡುಪಿ ನಗರ ಠಾಣೆಯಲ್ಲಿ ನೂತನ ಸಂದರ್ಶಕರ ಕೊಠಡಿ ಉದ್ಘಾಟನೆ
Friday, April 03, 2026
ಉಡುಪಿ ನಗರ ಠಾಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಸಂದರ್ಶಕರ ಕಚೇರಿಯನ್ನು ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು ಉದ್ಘಾಟಿಸಿದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಯಿಂದ ಬರುವ ಸಾರ್ವಜನಿಕರಿಗೆ ಉಡುಪಿ ನಗರ ಠಾಣೆಯಲ್ಲಿ ಕುಳಿತುಕೊಳ್ಳಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಠಾಣೆಗೆ ಬರುವ ಸಾರ್ವಜನಿಕರು ತಾಸುಗಟ್ಟಲೇ ಹೊರಗಡೆ ನಿಂತುಕೊಂಡೇ ಇರಬೇಕಾಗಿತ್ತು. ಇದನ್ನು ಗಮನಿಸಿದ ಉಡುಪಿ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಮುತುವರ್ಜಿಯಲ್ಲಿ ಸುಸಜ್ಜಿತವಾದ ಸಂದರ್ಶಕರ ಕೊಠಡಿಯನ್ನು ನಿರ್ಮಿಸಲಾಗಿದೆ. ನೂತನ ಕೊಠಡಿಯಲ್ಲಿ ಏಕ ಕಾಲದಲ್ಲಿ ಸುಮಾರು 15ರಿಂದ 20 ಜನ ಕುಳಿತುಕೊಳ್ಳುವ ಸ್ಥಳಾವಕಾಶವಿದ್ದು, ಆಸನ , ಫ್ಯಾನ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಉಡುಪಿ ನಗರ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಪ್ರಸಾದ್, ಉಪ ನಿರೀಕ್ಷಕ ಭರತೇಶ್ ಸೇರಿದಂತೆ ಅಧಿಕಾರಿ ಹಾಗು ಸಿಬ್ಬಂದಿಗಳು ಉಪಸ್ಥಿತರಿದ್ದರು.


