ಉಡುಪಿ: ಮಾದಕ ವಸ್ತು ಮಾರಾಟಕ್ಕೆ ಯತ್ನ: ಓರ್ವನ ಬಂಧನ
ಉಡುಪಿ ನಗರದ ಅಜ್ಜರಕಾಡು ಭುಜಂಗ ಪಾರ್ಕ್ ಸಮೀಪ ನಿಷೇಧಿತ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪದ ಮೇಲೆ ಓರ್ವನನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ಮಾದಕ ವಸ್ತು ಸಹಿತ ಅಂದಾಜು 85 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತನನ್ನು ಕಾಪು ತಾಲೂಕಿನ ಉದ್ಯಾವರ ಅಂಕುದ್ರು ನಿವಾಸಿ ವಿಜಯ್ ಅಲಿಯಾಸ್ ವಿಜಯ್ ಪೂಜಾರಿ (36) ಎಂದು ಗುರುತಿಸಲಾಗಿದೆ.
ಅ.17ರಂದು ಸಂಜೆ ಉಡುಪಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಭರತೇಶ್ ಕಂಕಣವಾಡಿ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ರಾತ್ರಿ 10.30ರ ಸುಮಾರಿಗೆ ಭುಜಂಗ ಪಾರ್ಕ್ ಸಮೀಪ ದಾಳಿ ನಡೆಸಲಾಯಿತು. ಈ ವೇಳೆ ಸ್ಕೂಟರ್ನಲ್ಲಿ ಮಾದಕ ವಸ್ತು ಇರಿಸಿಕೊಂಡು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಆರೋಪಿಯ ಸ್ಕೂಟರ್ನ ಡಿಕ್ಕಿಯಲ್ಲಿ 9 ಜಿಪ್ ಕವರ್ಗಳಲ್ಲಿದ್ದ 17.66 ಗ್ರಾಂ ತೂಕದ ಆಂಫೆಟಮೈನ್/ಮೆಥಾಂಫೆಟಮೈನ್ ಮಾದಕ ವಸ್ತು ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ 35 ಸಾವಿರ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಮಾದಕ ವಸ್ತು ತೂಕ ಮಾಡಲು ಬಳಸುತ್ತಿದ್ದ ಯಂತ್ರ, ಏಳು ಖಾಲಿ ಜಿಪ್ ಕವರ್ಗಳು ಹಾಗೂ ಕಾಗದದಲ್ಲಿ ಸುತ್ತಿಡಲಾಗಿದ್ದ 2.18 ಗ್ರಾಂ ತೂಕದ ಬಣ್ಣದ ಮಾತ್ರೆ ಮತ್ತು ಪುಡಿ ಪತ್ತೆಯಾಗಿದೆ.
ಆರೋಪಿಯ ಬಳಿಯಿದ್ದ ವಿವೋ ವೈ16 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ 40 ಸಾವಿರ ಅಂದಾಜು ಮೌಲ್ಯದ ಸುಜುಕಿ ಆಕ್ಸೆಸ್ 125 ಸ್ಕೂಟರ್ ಸೇರಿದಂತೆ ಇತರ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ರತ್ನಾಕರ್ ಕೆ. ತನಿಖೆ ಕೈಗೊಂಡಿದ್ದಾರೆ.
ಆರೋಪಿಯ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 2026 ಹಾಗೂ 2025ರಲ್ಲಿ ಎನ್ಡಿಪಿಎಸ್ ಕಾಯಿದೆಯಡಿ ತಲಾ ಒಂದು ಪ್ರಕರಣ ದಾಖಲಾಗಿದ್ದು, ಕಾಪು ಪೊಲೀಸ್ ಠಾಣೆಯಲ್ಲಿಯೂ 2026ರಲ್ಲಿ ಎನ್ಡಿಪಿಎಸ್ ಕಾಯಿದೆಯಡಿ ಪ್ರಕರಣ ದಾಖಲಾಗಿದೆ. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಮತ್ತೊಂದು ಪ್ರಕರಣ ದಾಖಲಾಗಿದೆ. ಆರೋಪಿ ಸೆ.24ರಂದು ಹಿರಿಯಡ್ಕ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉಡುಪಿ ಉಪವಿಭಾಗದ ಡಿವೈಎಸ್ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ, ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್ಐ ಭರತೇಶ್ ಕಂಕಣವಾಡಿ, ಪಿಎಸ್ಐ ರತ್ನಾಕರ್ ಕೆ. ಹಾಗೂ ಪೊಲೀಸ್ ಸಿಬ್ಬಂದಿಗಳಾದ ಜೀವನ್ ಕುಮಾರ್, ಆನಂದ ಗಾಣಿಗ, ಪ್ರಸನ್ನ ಸಿ., ಹೇಮಂತ್, ಓಬಳೇಶ, ಆನಂದಯ್ಯ ಸೇರಿದಂತೆ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
