ಉಚ್ಚಿಲ ದಸರಾ: 'ಪೊಣ್ಣು ಪಿಲಿ 'ಗಳ ಅಬ್ಬರದ ನಲಿಕೆಗೆ ಪ್ರೇಕ್ಷಕರು ಫಿದಾ!
ತುಳುನಾಡಿನ ಸಾಂಪ್ರದಾಯಿಕ ಹುಲಿವೇಷ ಕಲೆಗೆ ಮಹಿಳೆಯರೂ ಸೈ ಎನ್ನುವುದನ್ನು ಸಾಬೀತುಪಡಿಸಿದ ‘ಪೊಣ್ಣು ಪಿಲಿ ನಲಿಕೆ’ ಸ್ಪರ್ಧೆ ಉಡುಪಿ ಉಚ್ಚಿಲ ದಸರಾ ಮಹೋತ್ಸವದಲ್ಲಿ ಗಮನ ಸೆಳೆಯಿತು. ಸಾಂಪ್ರದಾಯಿಕ ಸೀರೆಯುಟ್ಟು ಹುಲಿವೇಷದ ವಿವಿಧ ಭಂಗಿಗಳಲ್ಲಿ ಹೆಜ್ಜೆ ಹಾಕಿದ 300ಕ್ಕೂ ಅಧಿಕ ಮಹಿಳೆಯರು ಪ್ರೇಕ್ಷಕರನ್ನು ರಂಜಿಸಿದರು. ಮಹಿಳೆಯರ ಹುಲಿವೇಷದ ಅಬ್ಬರಕ್ಕೆ ಸಭಾಂಗಣ ಶಿಳ್ಳೆ, ಚಪ್ಪಾಳೆ ಹಾಗೂ ಹರ್ಷೋದ್ಗಾರಗಳಿಂದ ಮೊಳಗಿತು.
ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಆಡಳಿತದ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ-2026ರ ಏಳನೇ ದಿನವಾದ ಶನಿವಾರ, ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ದಸರಾ ಮುಖ್ಯ ವೇದಿಕೆಯಾದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ಸಭಾಂಗಣದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಒಟ್ಟು 14 ತಂಡಗಳು ಭಾಗವಹಿಸಿ ತಮ್ಮ ಕಲಾಪ್ರತಿಭೆಯನ್ನು ಪ್ರದರ್ಶಿಸಿದವು.
ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಅವರು ಮಹಿಳೆಯರ ಹುಲಿವೇಷದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಕ್ಟೋಬರ್ 18ರಂದು ಮಂಗಳೂರಿನಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿಯೂ ಭಾಗವಹಿಸುವಂತೆ ಮಹಿಳಾ ತಂಡಗಳಿಗೆ ಆಹ್ವಾನ ನೀಡಿದರು.
ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉಚ್ಚಿಲ ದಸರಾ ಮಹೋತ್ಸವದ ಉದ್ದೇಶ ಮಹತ್ವದ ಫಲಿತಾಂಶ ನೀಡುತ್ತಿದೆ. ನಾಡೋಜ ಡಾ. ಜಿ. ಶಂಕರ್ ಅವರ ಪರಿಕಲ್ಪನೆಯಲ್ಲಿ ಅಭಿವೃದ್ಧಿಗೊಂಡಿರುವ ಉಚ್ಚಿಲ ಕ್ಷೇತ್ರವು ಇಂದು ದೇಶ-ವಿದೇಶಗಳ ಜನರ ಆಕರ್ಷಣೆಯ ತಾಣವಾಗಿ ಬೆಳೆದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಉಚ್ಚಿಲ ದಸರಾ ಮಹೋತ್ಸವದ ರೂವಾರಿ ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ತುಳುನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಹೋತ್ಸವದಲ್ಲಿ ಹಲವು ಮಹತ್ವದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಸೇರಿದಂತೆ ಹಲವು ದಾನಿಗಳು ಸಹಕಾರ ನೀಡುತ್ತಿದ್ದಾರೆ. ಈ ಬಾರಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಶಿಸ್ತುಬದ್ಧವಾಗಿ ದಸರಾ ಆಚರಿಸಲಾಗುತ್ತಿದೆ. ನಿರೀಕ್ಷೆಗೂ ಮೀರಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಮಹಾಲಕ್ಷ್ಮೀ ದೇವಿಯ ದರ್ಶನ ಪಡೆಯುತ್ತಿರುವುದು ದೇವಿಯ ಕೃಪೆಯಾಗಿದೆ. ಮಹೋತ್ಸವ ಇದುವರೆಗೆ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತಿದ್ದು, ಭಕ್ತರ ಸಹಕಾರ ಶ್ಲಾಘನೀಯ ಎಂದರು.
ಉಡುಪಿ ಶಾಸಕ ಹಾಗೂ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಯಶಪಾಲ್ ಎ. ಸುವರ್ಣ ಮಾತನಾಡಿ, ಶ್ರೀ ಮಹಾಲಕ್ಷ್ಮೀ ದೇವಿಯ ಆಶೀರ್ವಾದದಿಂದ ಬ್ಯಾಂಕ್ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಪ್ರತಿವರ್ಷ ಉಚ್ಚಿಲ ದಸರಾ ಮಹೋತ್ಸವದ ಭಾಗವಾಗುತ್ತಿರುವುದು ಹೆಮ್ಮೆಯ ಸಂಗತಿ. ಯುವ ಪ್ರತಿಭೆಗಳಿಗೆ ತಮ್ಮ ಕಲೆಯನ್ನು ಪ್ರದರ್ಶಿಸಲು ವೇದಿಕೆ ಒದಗಿಸುವ ಉದ್ದೇಶದಿಂದ ಬ್ಯಾಂಕ್ ಸಕ್ರಿಯವಾಗಿ ಸಹಕರಿಸುತ್ತಿದ್ದು, ಮುಂದೆಯೂ ಈ ಬೆಂಬಲ ಮುಂದುವರಿಯಲಿದೆ ಎಂದು ತಿಳಿಸಿದರು.
ಪೊಣ್ಣು ಪಿಲಿ ನಲಿಕೆ ಸ್ಪರ್ಧೆಯಲ್ಲಿ ದರ್ಪಣಾ ಮಹಿಳಾ ತಂಡ ಪ್ರಥಮ ಸ್ಥಾನ ಪಡೆದು 30,000 ನಗದು ಬಹುಮಾನ ಹಾಗೂ ಪ್ರಶಸ್ತಿ ತನ್ನದಾಗಿಸಿಕೊಂಡಿತು. ನಿಟ್ಟೂರಿನ ಡಿ.ಡಿ. ಗ್ರೂಪ್ ದ್ವಿತೀಯ ಸ್ಥಾನ ಪಡೆದು 25,000, ಮಲ್ಪೆಯ ಕಿಡ್ಸ್ ಟೀಂ ತೃತೀಯ ಸ್ಥಾನ ಪಡೆದು 15,000 ಹಾಗೂ ಮಲ್ಪೆಯ ಫ್ರೆಂಡ್ಸ್ ಟೀಂ ನಾಲ್ಕನೇ ಸ್ಥಾನ ಪಡೆದು 7,500 ಬಹುಮಾನ ಗಳಿಸಿತು.
ವೈಯಕ್ತಿಕ ಸೀರೆ ವಿಭಾಗದಲ್ಲಿ ಮಲ್ಪೆಯ ಪೂರ್ವಿ ರಾಜೇಶ್ ಪ್ರಥಮ, ಸುರತ್ಕಲ್ನ ಸೌಮ್ಯಾ ಸುರೇಂದ್ರ ದ್ವಿತೀಯ ಹಾಗೂ ರಮ್ಯಾ ರೂಪೇಶ್ ತೃತೀಯ ಸ್ಥಾನ ಪಡೆದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ತಂಡಗಳಿಗೂ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಬೆಳ್ಳಂಪಳ್ಳಿ, ಉಪಾಧ್ಯಕ್ಷ ಮೋಹನ್ ಬೇಂಗ್ರೆ, ಕಾರ್ಯದರ್ಶಿ ಶರಣ್ ಕುಮಾರ್, ಕೋಶಾಧಿಕಾರಿ ರತ್ನಾಕರ ಸಾಲ್ಯಾನ್, ಸಂಘದ ಮುಂಬಯಿ ಸಮಿತಿ ಅಧ್ಯಕ್ಷ ವೇದಪ್ರಕಾಶ್ ಶ್ರೀಯಾನ್, ಮಹಿಳಾ ಮೊಗವೀರ ಸಂಘದ ಅಧ್ಯಕ್ಷೆ ಕವಿತಾ ಶರತ್, ಸನ್ನಿಧಿ ಅರ್ಚಕ ರಾಘವೇಂದ್ರ ಉಪಾಧ್ಯಾಯ, ಸಮಿತಿ ಅಧ್ಯಕ್ಷ ಗಿರಿಧರ ಸುವರ್ಣ, ಉಚ್ಚಿಲ ದಸರಾ ಸಮಿತಿ ಅಧ್ಯಕ್ಷ ವಿನಯ ಕರ್ಕೇರ, ಮಹಿಳಾ ಸಂಚಾಲಕಿ ಸಂಧ್ಯಾದೀಪ ಸುನಿಲ್, ಬ್ಯಾಂಕ್ ಉಪಾಧ್ಯಕ್ಷ ವಾಸುದೇವ ಸಾಲ್ಯಾನ್, ಯುವರಾಜ್ ಮಸ್ಕತ್, ಮಲ್ಪೆ ಟ್ರಾಲ್ ಬೋಟ್ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ರಾಮಚಂದ್ರ ಕುಂದರ್, ಶೇಖರ ಸಾಲ್ಯಾನ್, ಚೇತನ್ ಬೆಂಗ್ರೆ , ಮನೋಜ್ ಕಾಂಚನ್, ಶಿಲ್ಪಾ ಸುವರ್ಣ ಹಾಗೂ ತೀರ್ಪುಗಾರರಾದ ಪಡ್ಡಾಂ, ಸುಧಾಕರ ಬೈಲಕೆರೆ ಮತ್ತು ತಣ್ಣೀರುಬಾವಿ ಉಪಸ್ಥಿತರಿದ್ದರು.
ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್ ಸಿಬ್ಬಂದಿ ವಿಜೇತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


