-->
 ಉಚ್ಚಿಲ ದಸರಾ ಶೋಭಾಯಾತ್ರೆ: ಅ.21ರಂದು ಹೆದ್ದಾರಿಯಲ್ಲಿ ಸಂಚಾರ ಬದಲಾವಣೆ

ಉಚ್ಚಿಲ ದಸರಾ ಶೋಭಾಯಾತ್ರೆ: ಅ.21ರಂದು ಹೆದ್ದಾರಿಯಲ್ಲಿ ಸಂಚಾರ ಬದಲಾವಣೆ


ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ-2026ರ ಸಮಾರೋಪದ ಅಂಗವಾಗಿ ಅಕ್ಟೋಬರ್ 21ರಂದು ನಡೆಯಲಿರುವ ಬೃಹತ್ ಶೋಭಾಯಾತ್ರೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಹಾಗೂ ನಿರ್ಬಂಧ ವಿಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.


ಅಕ್ಟೋಬರ್ 11ರಿಂದ ಆರಂಭಗೊಂಡಿರುವ ಉಚ್ಚಿಲ ದಸರಾ ಮಹೋತ್ಸವವು ಅ.21ರಂದು ಸಮಾಪನಗೊಳ್ಳಲಿದ್ದು, ಈ ಸಂದರ್ಭ ಬೃಹತ್ ಶೋಭಾಯಾತ್ರೆ ನಡೆಯಲಿದೆ. ಶೋಭಾಯಾತ್ರೆಯಿಂದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಪೊಲೀಸ್ ಅಧೀಕ್ಷಕರ ವರದಿಯ ಆಧಾರದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಆದೇಶದ ಪ್ರಕಾರ, ಉಡುಪಿ–ಮಂಗಳೂರು ಮಾರ್ಗದಲ್ಲಿ ಸಂಚರಿಸುವ ಘನ ವಾಹನಗಳಿಗೆ ಅ.21ರಂದು ಮಧ್ಯಾಹ್ನ 3ರಿಂದ ರಾತ್ರಿ 11ರವರೆಗೆ ನಿರ್ಬಂಧ ವಿಧಿಸಲಾಗಿದೆ. ಈ ವಾಹನಗಳು ಕಟಪಾಡಿ–ಶಿರ್ವ–ಬೆಳ್ಳಣ್–ಪಡುಬಿದ್ರಿ ಪರ್ಯಾಯ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ.

ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವ ವಾಹನಗಳು ಕಟಪಾಡಿ–ಶಿರ್ವ–ಬೆಳ್ಳಣ್–ಮುಂಡೂರು ಮಾರ್ಗವಾಗಿ ಸಂಚರಿಸಬೇಕು. ಟ್ರಕ್, ಲಾರಿ, ಟ್ಯಾಂಕರ್ ಸೇರಿದಂತೆ ಘನ ವಾಹನಗಳು ರಾತ್ರಿ 9 ಗಂಟೆಯವರೆಗೆ ಕುಂದಾಪುರ ಮತ್ತು ಉಡುಪಿ ಭಾಗಗಳಲ್ಲಿರುವ ಟ್ರಕ್ ಬೇಗಳಲ್ಲಿ ನಿಲುಗಡೆ ಮಾಡಬೇಕು. ಬಳಿಕ ತಮ್ಮ ಪ್ರಯಾಣ ಮುಂದುವರಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಉಡುಪಿಯಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುವ ರಾತ್ರಿ ಪ್ರಯಾಣಿಕರ ಬಸ್‌ಗಳು ರಾತ್ರಿ 9 ಗಂಟೆಯ ಬಳಿಕ ಸಂಚಾರ ಮುಂದುವರಿಸುವಂತೆ ಸೂಚಿಸಲಾಗಿದೆ. ಆದರೆ, ವಿವಿಐಪಿ ವಾಹನಗಳು, ಸರ್ಕಾರಿ ವಾಹನಗಳು ಹಾಗೂ ತುರ್ತು ಸೇವಾ ವಾಹನಗಳಿಗೆ ಈ ಸಂಚಾರ ನಿಯಂತ್ರಣ ಅನ್ವಯಿಸುವುದಿಲ್ಲ.

ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮಗಳು 1989ರ ನಿಯಮ 221(5)(ಎ)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಉಡುಪಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸ್ವರೂಪ ಟಿ.ಕೆ. ಅವರು ಅಕ್ಟೋಬರ್ 16ರಂದು ಈ ಆದೇಶ ಹೊರಡಿಸಿದ್ದಾರೆ.

Ads on article

Advertise in articles 1

advertising articles 2

Advertise under the article