-->
ಕೇರಳ ಪೊಲೀಸರ ರಾಷ್ಟ್ರೀಯ ಬೈಕ್‌ ರ್ಯಾಲಿಗೆ ಉಡುಪಿಯಲ್ಲಿ ಸ್ವಾಗತ

ಕೇರಳ ಪೊಲೀಸರ ರಾಷ್ಟ್ರೀಯ ಬೈಕ್‌ ರ್ಯಾಲಿಗೆ ಉಡುಪಿಯಲ್ಲಿ ಸ್ವಾಗತ


ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆಗೆ ಕಡಿವಾಣ ಹಾಕಲು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು. ಜಿಲ್ಲೆಯಲ್ಲಿ ಯಾರಾದರೂ ಮಾದಕ ವಸ್ತುಗಳನ್ನು ಬಳಸುತ್ತಿರುವುದು ಅಥವಾ ಮಾರಾಟ ಮಾಡುತ್ತಿರುವುದು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು. ಸ್ನೇಹಿತರು, ಪರಿಚಿತರು ಸೇರಿದಂತೆ ಯಾರಾದರೂ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದರೆ ಅವರನ್ನು ಅದರಿಂದ ಹೊರತರುವ ಪ್ರಯತ್ನ ಮಾಡಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಹರಿರಾಮ ಶಂಕರ್ ಕರೆ ನೀಡಿದರು.


ರಾಷ್ಟ್ರೀಯ ಏಕತಾ ದಿನದ ಅಂಗವಾಗಿ ‘ಮಾದಕ ದ್ರವ್ಯಗಳ ವಿರುದ್ಧ ಹೋರಾಟ’ ಎಂಬ ಜಾಗೃತಿ ಸಂದೇಶದೊಂದಿಗೆ ಕೇರಳಂನ ಲಕ್ಷದ್ವೀಪದಿಂದ ಗುಜರಾತ್‌ನ ಏಕತಾ ನಗರಕ್ಕೆ ತೆರಳುತ್ತಿರುವ ಕೇರಳ ಪೊಲೀಸರ ರಾಷ್ಟ್ರೀಯ ಬೈಕ್‌ ರ್ಯಾಲಿಗೆ ಸ್ವಾಗತ ಕೋರಿ, ಉಡುಪಿ ಜಿಲ್ಲಾ ಪೊಲೀಸ್‌ ಇಲಾಖೆಯ ವತಿಯಿಂದ ನಗರದ ಕ್ಲಾಕ್‌ ಟವರ್‌ ಬಳಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯ. ಯುವಜನತೆ ಈ ಜಾಲಕ್ಕೆ ಬಲಿಯಾಗದಂತೆ ಎಚ್ಚರ ವಹಿಸುವುದರ ಜತೆಗೆ, ಮಾದಕ ವ್ಯಸನದಿಂದ ದೂರ ಉಳಿಯುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.


ಕೇರಳ ಪೊಲೀಸ್‌ ಅಧಿಕಾರಿ ಅಶ್ವಿನ್‌ ರಾಯ್‌ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ವ್ಯಕ್ತಿಯ ಆರೋಗ್ಯ ಹಾಗೂ ಜೀವನದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿ ಜಾಗೃತಿ ಮೂಡಿಸಿದರು.

ಉಡುಪಿ ಅಪರ ಜಿಲ್ಲಾಧಿಕಾರಿ ಅಬೀದ್‌ ಗದ್ಯಾಳ ಮಾತನಾಡಿ, “ವಿದೇಶಗಳಿಂದ ನಡೆಯುತ್ತಿರುವ ಮಾದಕ ವಸ್ತುಗಳ ದಂಧೆಗೆ ಕಡಿವಾಣ ಹಾಕಲು ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಿದೆ. ಯುವಜನತೆಯನ್ನು ತಪ್ಪು ದಾರಿಗೆ ಎಳೆಯುವುದೇ ಈ ಜಾಲದ ಉದ್ದೇಶವಾಗಿದೆ. ಈ ಕುರಿತು ಜಾಗೃತಿ ಮೂಡಿಸಲು ಜಿಲ್ಲಾಡಳಿತ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಮಾದಕ ವಸ್ತುಗಳ ದಂಧೆಯ ಬಗ್ಗೆ ಮಾಹಿತಿ ಇದ್ದವರು ಪೊಲೀಸ್‌ ಇಲಾಖೆಯ ಕ್ಯೂಆರ್‌ ಕೋಡ್‌ ವ್ಯವಸ್ಥೆಯ ಮೂಲಕ ಮಾಹಿತಿ ನೀಡಬಹುದು” ಎಂದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠ ಸುಧಾಕರ ನಾಯ್ಕ, ಡಿವೈಎಸ್ಪಿ ಬೆಳ್ಳಿಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪ್ರೇಮಕುಮಾರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ ಸಿ., ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಅನಿತಾ ಎಂ. ಹಾಗೂ ಉಡುಪಿ ನಗರ ಠಾಣೆಯ ಪೊಲೀಸ್‌ ನಿರೀಕ್ಷಕ ಮಹೇಶ ಪ್ರಸಾದ ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಳಿಕ ಗೋಕರ್ಣ ಮತ್ತು ಪಣಜಿ ಮಾರ್ಗವಾಗಿ ಗುಜರಾತ್‌ನತ್ತ ಮುಂದುವರಿದ ರಾಷ್ಟ್ರೀಯ ಬೈಕ್‌ ರ್ಯಾಲಿಗೆ ಅಪರ ಜಿಲ್ಲಾಧಿಕಾರಿ ಅಬೀದ್‌ ಗದ್ಯಾಳ ಹಾಗೂ ಇತರರು ಚಾಲನೆ ನೀಡಿದರು. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article