ಅ.23ರಂದು SIR ವಿರುದ್ಧ ಉಡುಪಿಯಲ್ಲಿ ಬೃಹತ್ ಪಾದಯಾತ್ರೆ: ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ನಿರ್ಧಾರ
Monday, October 19, 2026
ಕೇಂದ್ರ ಚುನಾವಣಾ ಆಯೋಗದ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹಾಗೂ ಕೇಂದ್ರ ಸರ್ಕಾರದ ನೀತಿಗಳನ್ನು ಖಂಡಿಸಿ ಅಕ್ಟೋಬರ್ 23ರಂದು ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ಮತ್ತು ಪಾದಯಾತ್ರೆ ನಡೆಸಲು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಿರ್ಧರಿಸಿದೆ.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರ ಮಾರ್ಗದರ್ಶನದಲ್ಲಿ ಭಾನುವಾರ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅಕ್ಟೋಬರ್ 23ರಂದು ಅಜ್ಜರಕಾಡಿನ ಗಾಂಧಿ ಪ್ರತಿಮೆಯಿಂದ ಸರ್ವಿಸ್ ಬಸ್ ನಿಲ್ದಾಣದವರೆಗೆ ಬೃಹತ್ ಪಾದಯಾತ್ರೆ ನಡೆಯಲಿದ್ದು, ಬಳಿಕ ಸಾರ್ವಜನಿಕ ಪ್ರತಿಭಟನಾ ಸಭೆ ಆಯೋಜಿಸಲಾಗುತ್ತದೆ. ಸಹಬಾಳ್ವೆ ಸೇರಿದಂತೆ ವಿವಿಧ ಸಹಭಾಗಿ ಸಂಘಟನೆಗಳ ಬೆಂಬಲದೊಂದಿಗೆ ನಡೆಯಲಿರುವ ಪ್ರತಿಭಟನೆಯಲ್ಲಿ ಜಿಲ್ಲಾ ಹಾಗೂ ಬ್ಲಾಕ್ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಇದೇ ವೇಳೆ, ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ನಾಯಕರಿಗೆ ಸೂಚಿಸಲಾಯಿತು.
ಅಕ್ಟೋಬರ್ 29ರಂದು ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳ ಸಹಾಯಾರ್ಥವಾಗಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ಆಯೋಜಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ದಿನೇಶ್ ಪುತ್ರನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಕಿಣಿ ಹಾಗೂ ಅಮೃತ್ ಶೆಣೈ ಉಪಸ್ಥಿತರಿದ್ದು, ಚರ್ಚಿತ ವಿಷಯಗಳ ಕುರಿತು ಸಲಹೆ ಮತ್ತು ಮಾರ್ಗದರ್ಶನ ನೀಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖ ನಾಯಕರು, ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.

.jpeg)