ಅಮೆರಿಕ–ಭಾರತ ಧಾರ್ಮಿಕವಾಗಿ ಒಂದಾದರೆ ವಿಶ್ವಕ್ಕೆ ಒಳಿತು: ಪುತ್ತಿಗೆ ಶ್ರೀ
ವಾಮನಾವತಾರದಲ್ಲಿ ಭಗವಂತನು ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆ ಭೂಮಿಯನ್ನು ಕೇಳಿದ್ದರೆ, ಇಂದು ಭಕ್ತರು ಶ್ರೀಕೃಷ್ಣ ಮತ್ತು ಶ್ರೀವೆಂಕಟೇಶ್ವರ ದೇವಾಲಯ ನಿರ್ಮಾಣಕ್ಕಾಗಿ ಎಂಟು ಎಕರೆ ಭೂಮಿಯನ್ನು ಸಮರ್ಪಿಸಿದ್ದಾರೆ. ಭೂದಾನ ಹಾಗೂ ದೇವಾಲಯ ನಿರ್ಮಾಣ ಕಾರ್ಯಗಳು ಜೀವನದಲ್ಲಿ ದೊರೆಯುವ ಶ್ರೇಷ್ಠ ಪುಣ್ಯಾವಕಾಶಗಳಾಗಿವೆ. ಇಂದಿನ ಎಐ ಎಂದರೆ ಅಮೆರಿಕ ಆ್ಯಂಡ್ ಇಂಡಿಯಾ ಎಂದೂ ಅರ್ಥೈಸಬಹುದು. ಅಮೆರಿಕ ಮತ್ತು ಭಾರತ ಧಾರ್ಮಿಕವಾಗಿ ಒಂದಾದರೆ ಇಡೀ ವಿಶ್ವಕ್ಕೆ ಒಳಿತಾಗಲಿದೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ಅಮೆರಿಕದ ಹ್ಯೂಸ್ಟನ್‌ನಲ್ಲಿ ಶ್ರೀಕೃಷ್ಣ ವೃಂದಾವನದ ವಿಸ್ತರಿತ ನೂತನ ದೇವಾಲಯ ನಿರ್ಮಾಣಕ್ಕಾಗಿ ಎಂಟು ಎಕರೆ ಭೂಮಿ ಸಮರ್ಪಣೆ ಹಾಗೂ ಗುರುವಂದನಾ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ದೇವಾಲಯ ನಿರ್ಮಾಣವಾಗಲಿರುವ ಸ್ಥಳದ ಸುತ್ತಮುತ್ತ ಚರ್ಚ್, ಮಸೀದಿ, ಬೌದ್ಧ ಮಂದಿರ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿವೆ. ಇದು ಸನಾತನ ಧರ್ಮದ ‘ವಸುದೈವ ಕುಟುಂಬಕಂ’ ಸಂದೇಶಕ್ಕೆ ಸಾಕ್ಷಿಯಾಗಿದೆ. ಇಲ್ಲಿ ನಿರ್ಮಾಣವಾಗುವ ಶ್ರೀಕೃಷ್ಣ ವೃಂದಾವನವು ಸರ್ವಧರ್ಮ ಸಾಮರಸ್ಯ ಮತ್ತು ಆಧ್ಯಾತ್ಮಿಕ ಏಕತೆಯ ಪ್ರತೀಕವಾಗಲಿದೆ. ಜನರು ನಾಸಾ ವೀಕ್ಷಿಸಲು ಹ್ಯೂಸ್ಟನ್‌ಗೆ ಬರುವಂತೆ ಶ್ರೀಕೃಷ್ಣ ವೃಂದಾವನದ ದರ್ಶನಕ್ಕೂ ಬರುವಂತಾಗಬೇಕು ಎಂದು ಶ್ರೀಗಳು ಆಶಿಸಿದರು.
ವೃಂದಾವನ ನಿರ್ಮಾಣಕ್ಕಾಗಿ ಎಂಟು ಎಕರೆ ಭೂಮಿ ಸಮರ್ಪಿಸಿದ ಜಮುನಾ ಮತ್ತು ಬಿ.ಎನ್. ಮುರಳಿ ದಂಪತಿ ಶ್ರೀಗಳಿಗೆ ಭೂದಾನದ ಫಲಕವನ್ನು ಅರ್ಪಿಸಿದರು. ಸುಮಾರು 19 ಲಕ್ಷ ಡಾಲರ್ ಮೌಲ್ಯದ ಭೂಮಿ ಖರೀದಿಗೆ ಸಹಕರಿಸಿದ ಹ್ಯೂಸ್ಟನ್‌ನ ಜೈನ ಸೊಸೈಟಿ ಹಾಗೂ ಒಂದು ಮಿಲಿಯನ್ ಡಾಲರ್ ದೇಣಿಗೆ ನೀಡಿದ ಗೀತಾ ಮತ್ತು ರಾಮರಾವ್ ದಂಪತಿಯನ್ನು ಶ್ರೀಗಳು ಸನ್ಮಾನಿಸಿ ಆಶೀರ್ವದಿಸಿದರು.
ಹ್ಯೂಸ್ಟನ್ ನಗರದ ಮೇಯರ್ ಶ್ರೀಪಾದರಿಗೆ ಅಧಿಕೃತ ಗೌರವಪತ್ರ ನೀಡಿ ಗುರುವಂದನೆ ಸಲ್ಲಿಸಿದರು. ಭಾರತದ ಹ್ಯೂಸ್ಟನ್ ಕಾನ್ಸುಲೇಟ್ ಜನರಲ್ ಡಿ.ಸಿ. ಮಂಜುನಾಥ, ಫೋರ್ಟ್ ಬೆಂಡ್ ಕೌಂಟಿ ಕಮಿಷನರ್ ಆ್ಯಂಡಿ ಮೇಯರ್ಸ್, ನ್ಯಾಯಾಧೀಶ ಡೇನಿಯಲ್ ವಾಂಗ್, ಟೆಕ್ಸಾಸ್‌ನ 240ನೇ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸುರೇಂದ್ರನ್ ಪಿ., ವಿಎಚ್‌ಪಿ ಪ್ರತಿನಿಧಿ ಎನ್.ಎ. ಜೋಶಿಪುರ ನೇತೃತ್ವದ ನಿಯೋಗ, ಮಠದ ದಿವಾನ ನಾಗರಾಜ ಆಚಾರ್ಯ, ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರಾಜೇಶ್ವರಿ ಪಳಗದ ನೇತೃತ್ವದಲ್ಲಿ ಮಹಿಳೆಯರು ಪುತ್ತಿಗೆ ಮಠದ ಗುರುಪರಂಪರೆಯ ಸ್ತುತಿಗೀತೆಗಳನ್ನು ಹಾಡಿದರು. ಸ್ಥಳದಾನಿ ಬಿ.ಎನ್. ಮುರಳಿ ಸ್ವಾಗತಿಸಿದರು. ಸಂತೋಷ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೀರ್ತಿ ನೀಲಮಣಿ ವಂದಿಸಿದರು. ಉಜ್ವಲಾ ಭಟ್ ಕಾರ್ಯಕ್ರಮ ನಿರ್ವಹಿಸಿದರು.
ಸುಮಾರು 15 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀಕೃಷ್ಣ ವೃಂದಾವನದಲ್ಲಿ ಸಾವಿರ ಆಸನಗಳ ಸಭಾಂಗಣ, 370 ಕಾರುಗಳ ನಿಲುಗಡೆ ವ್ಯವಸ್ಥೆ ಹಾಗೂ 100 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಸೌಲಭ್ಯ ಕಲ್ಪಿಸುವ ಉದ್ದೇಶವಿದೆ. ಅಮೆರಿಕದಲ್ಲಿಯೂ ಶ್ರೀ ಪುತ್ತಿಗೆ ವಿದ್ಯಾಪೀಠ ಸ್ಥಾಪಿಸಿ ವೇದ, ಆಗಮ ಮತ್ತು ಅರ್ಚಕ ವೃತ್ತಿಯ ಶಿಕ್ಷಣ ನೀಡಲು ಯೋಜಿಸಲಾಗಿದೆ. ಈ ಮೂಲಕ ವೃಂದಾವನವು ಧಾರ್ಮಿಕ ಹಾಗೂ ಶೈಕ್ಷಣಿಕ ಕೇಂದ್ರವಾಗಿ ಬೆಳೆಯಲಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಉಡುಪಿ ಮಾದರಿಯಲ್ಲಿ ಹುಲಿವೇಷ ಕುಣಿತ ಹಾಗೂ ಕೋಲಾಟದೊಂದಿಗೆ ಶ್ರೀಪಾದರು ಮತ್ತು ಗಣ್ಯರನ್ನು ಸ್ವಾಗತಿಸಲಾಯಿತು. ಬಳಿಕ ಕುದುರೆ ಸಾರೋಟಿನಲ್ಲಿ ಎಂಟು ಎಕರೆ ಪ್ರದೇಶದ ಸುತ್ತ ಕರೆದೊಯ್ದು ಸ್ಥಳ ಪರಿವೀಕ್ಷಣೆ ಮಾಡಿಸಲಾಯಿತು. ಇಸ್ಕಾನ್, ವ್ಯಾಸ ಸಮೂಹ, ಚಿನ್ಮಯ ಮಿಷನ್, ಸ್ವಾಮಿನಾರಾಯಣ ಮಂದಿರ ಹಾಗೂ ಅಷ್ಟಲಕ್ಷ್ಮೀ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

.jpeg)
.jpeg)