ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿರುವ ಬಾಲಕಿಗಾಗಿ ಮುಂದುವರಿದ ಶೋಧ
ಚಿಕ್ಕಮಗಳೂರಿನ ಪ್ರಸಿದ್ಧ ಪ್ರವಾಸಿ ತಾಣ ಮಾಣಿಕ್ಯಧಾರಾ ಜಲಪಾತದ ಬಳಿ ನಾಪತ್ತೆಯಾಗಿರುವ ಕೇರಳದ ಪಾಲಕ್ಕಾಡ್ ಜಿಲ್ಲೆಯ ಬಾಲಕಿ ಶ್ರೀನಂದಾ (14) ಪತ್ತೆಗಾಗಿ ಜಿಲ್ಲಾಡಳಿತ ಕಾರ್ಯಾಚರಣೆ ಕೈಗೊಂಡಿದೆ.
ಘಟನೆ ನಡೆದು 48 ಗಂಟೆಗಳೇ ಕಳೆದರೂ ಬಾಲಕಿಯ ಯಾವುದೇ ಸುಳಿವು ಲಭ್ಯವಾಗಿಲ್ಲ. ಮಂಗಳವಾರ ಸಂಜೆ ಕುಟುಂಬಸ್ಥರೊಂದಿಗೆ ಪ್ರವಾಸಕ್ಕೆ ಬಂದಿದ್ದ ಶ್ರೀನಂದಾ, ಸಂಜೆ 5:30ರ ವರೆಗೆ ಎಲ್ಲರೊಂದಿಗೂ ಇದ್ದಳು. ತಂದೆಯ ಮೊಬೈಲ್‌ನಲ್ಲಿ ಸಂಬಂಧಿಕರೊಂದಿಗೆ ರೀಲ್ಸ್ ಮಾಡಿ, ಫೋಟೋಗಳನ್ನು ತೆಗೆಸಿಕೊಂಡಿದ್ದಳು. ಆದರೆ, ಜಲಪಾತದ ಮೆಟ್ಟಿಲುಗಳನ್ನು ಇಳಿದು ಬರುವ ಸಂದರ್ಭದಲ್ಲಿ ಬಾಲಕಿ ದಿಢೀರ್ ಎಂದು ನಾಪತ್ತೆಯಾಗಿದ್ದಾಳೆ.ಗುರುವಾರ ಮುಂಜಾನೆಯಿಂದಲೇ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ (SDRF) ತಂಡದ 100ಕ್ಕೂ ಹೆಚ್ಚು ಸಿಬ್ಬಂದಿ ಕಾಡಿನ ಮೂಲೆಮೂಲೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ದಟ್ಟ ಅರಣ್ಯ ಮತ್ತು ಮಂಜಿನ ನಡುವೆ ಬಾಲಕಿಯನ್ನು ಪತ್ತೆ ಹಚ್ಚಲು ಶ್ವಾನದಳ, ಸಾಮಾನ್ಯ ಡ್ರೋನ್ ಹಾಗೂ ದೇಹದ ಉಷ್ಣತೆಯನ್ನು ಗುರುತಿಸುವ ‘ಥರ್ಮಲ್ ಡ್ರೋನ್’ಗಳನ್ನು ಬಳಸಲಾಗುತ್ತಿದೆ. ಸ್ಥಳೀಯ ನಿವಾಸಿಗಳು ಕೂಡ ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದಾರೆ.ಇನ್ನೂ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಶೋಧ ಕಾರ್ಯ ತೀವ್ರಗೊಳಿಸಲು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.