ರೈಲಿನಿಂದ ಜಿಗಿಯಲು ಯತ್ನಿಸಿದ್ದ ಯುವಕನ ವಾರೀಸುದಾರರು ಪತ್ತೆ(Video)
ಕೆಲವು ದಿನಗಳ ಹಿಂದೆ ರೈಲಿನಿಂದ ಜಿಗಿದು ತಪ್ಪಿಸಿಕೊಳ್ಳಲು ಯತ್ನಿಸಿದ್ದ ಟಿಕೆಟ್ ರಹಿತ ಪ್ರಯಾಣಿಕನನ್ನು ರಕ್ಷಿಸಿದ್ದು, ಇದೀಗ ವಾರೀಸುದಾರರ ಸುಪರ್ದಿಗೆ ಒಪ್ಪಿಸಲಾಗಿದೆ.
ಪ್ರಯಾಣಚೀಟಿ ರಹಿತವಾಗಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಚಲಿಸುತ್ತಿದ್ದ ರೈಲು ಗಾಡಿಯ ಬಾಗಿಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದಾಗ, ಕರ್ತವ್ಯ ನಿರ್ವಸುತ್ತಿದ್ದ ಪ್ರಯಾಣಚೀಟಿ ತಪಾಸಣಾಧಿಕಾರಿ ಬಾಬು ಅವರ ಸಮಯಪ್ರಜ್ಞೆಯಿಂದ ಯುವಕನನ್ನು ರಕ್ಷಿಸಲಾಗಿತ್ತು.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು, ಇನ್ನಂಜೆ ರೈಲು ನಿಲ್ದಾಣದ ಸನಿಹ ಬಂದಾಗ ಘಟನೆ ನಡೆದಿತ್ತು. ಬಳಿಕ ಬಾಬು ಅವರು, ರಕ್ಷಿಸಿದ್ದ ಯುವಕನನ್ನು ಇಂದ್ರಾಳಿ ರೈಲು ನಿಲ್ದಾಣದ ಆರ್ ಪಿ ಎಫ್ ಕಛೇರಿ ವಶಕ್ಕೆ ಒಪ್ಪಿಸಿದರು. ಯುವಕ ಮನೋರೋಗಿ ಎಂದು ತಿಳಿದು ಬಂದಿರುವುದರಿOದ ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ಬಳಿಕ ಒಳಕಾಡುವರು ಯುವಕನ ಕೇರಳ ಕಲ್ಚರಲ್ ಸೊಸಿಯಲ್ ಸೆಂಟರಿನ ನೆರವುಪಡೆದರು. ತಕ್ಷಣ ಸ್ಪಂದಿಸಿದ ಸೆಂಟರಿನ ಅಧ್ಯಕ್ಷ ಸುಗುಣ ಕುಮಾರ್, ಕಾರ್ಯದರ್ಶಿ ಬೀನೆಶ್, ಹಾಗೂ ಇತರ ಸದಸ್ಯರು ಅಪರಿಚಿತ ಯುವಕನ ವಿವರಗಳನ್ನು ಕೇರಳ ರಾಜ್ಯದ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟು ಸಂಬOಧಿಕರ ಪತ್ತೆಗೊಳಿಸುವಲ್ಲಿ ಯಶಸ್ವಿಯಾದರು.