ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಮಕ್ಕಳು, ಮಹಿಳೆಯರಿಬ್ಬರ ರಕ್ಷಣೆ (Video)
ಉಡುಪಿ ಜಿಲ್ಲೆಯ ಕಟಪಾಡಿ ಬಸ್ಸು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಇಬ್ಬರು ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳು ಹಾಗೂ ಇಬ್ಬರು ಮಹಿಳೆಯರನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ಅಕ್ಕಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಜೂಹಿ ದಾಮೋದರ, ಸದಸ್ಯರಾದ ಮಿತ್ರಕುಮಾರ್, ಅನಿತಾ, ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
3 ಮತ್ತು 10 ವರ್ಷದ ಬಾಲಕಿಯರು ಹಾಗೂ ಮಕ್ಕಳ ತಾಯಿ, ದೊಡ್ಡಮ್ಮ ಒಟ್ಟು ನಾಲ್ವರು ಕಟಪಾಡಿ ಬಸ್ಸು ನಿಲ್ದಾಣದಲ್ಲಿ ಹಲವು ದಿನಗಳಿಂದ ಅಸಹಾಯಕ ಸ್ಥಿತಿಯಲ್ಲಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರು. ರಕ್ಷಿಸಲ್ಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು.
ಕಲ್ಯಾಣ ಸಮಿತಿಯ ಆದೇಶಾನುಸಾರ ಮಕ್ಕಳ ಆರೋಗ್ಯ ಸ್ಥಿತಿ ತಪಾಸಣೆ ನಡೆಸಬೇಕಾಯಿತು. ಕೂಸಮ್ಮ ಶಂಭು ಶೆಟ್ಟಿ,- ಹಾಜೀ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನಿಂದ ದಾಖಲುಪಡಿಸಲಾಯಿತು. ಮಕ್ಕಳ ದೊಡ್ಡಮ್ಮಳಿಗೆ ಕ್ಷಯರೋಗ ಲಕ್ಷಣಗಳು ಕಂಡುಬಂದಿರುವುದರಿಂದ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಯ ವೈದ್ಯರ ತಪಾಸಣಾ ವರದಿಯ ಬಳಿಕ ಮಕ್ಕಳಿಗೆ ಚಿಕಿತ್ಸೆ ಪುರ್ನವಸತಿ, ಅಥವಾ ವಾರಸುದಾರರಿಗೆ ಒಪ್ಪಿಸುವ ಕಾನೂನು ಪ್ರಕ್ರಿಯೆಗಳು ಇಲಾಖೆಯಿಂದ ಮುಂದಿನ ಹಂತದಲ್ಲಿ ನಡೆಯಲಿದೆ.