ಬಾರ್ಕೂರಿನಲ್ಲಿ ವರ್ಷಕ್ಕೆ ಕನಿಷ್ಠ 100 ರಥೋತ್ಸವ ನಡೆಸಲು ಚಿಂತನೆ: ಹೆಚ್.ಕೆ ಪಾಟೀಲ್
ಬಾರ್ಕೂರಿನಲ್ಲಿ ವರ್ಷಕ್ಕೆ ಕನಿಷ್ಠ 100 ರಥೋತ್ಸವಗಳನ್ನು ಆಯೋಜಿಸುವ ಮೂಲಕ ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವಂತೆ ರಾಜ್ಯ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಇತಿಹಾಸ ಪ್ರಸಿದ್ಧ ಬಾರ್ಕೂರು ಆಳುಪ ವಂಶದ ರಾಜಧಾನಿಯಾಗಿದ್ದು, ಪ್ರತಿದಿನವೂ ರಥೋತ್ಸವ ನಡೆಯುತ್ತಿತ್ತು . ಹೀಗಾಗಿ ಗತವೈಭವ ಮರುಕಳಿಸುವ ನಿಟ್ಟಿನಲ್ಲಿ ಸಮಗ್ರ ವರದಿ ಮತ್ತು ಕಾರ್ಯಯೋಜನೆ ಸಿದ್ಧಪಡಿಸಲು ಚಿಂತನೆ ನಡೆಸಿದ್ದು, ತಜ್ಞರ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದರು.
ಪಾರಂಪರಿಕ ಜ್ಞಾನ ಸಂರಕ್ಷಣೆಗೆ ಸರ್ಕಾರ ಜ್ಞಾನ ಭಂಡಾರ ಹಸ್ತಪ್ರತಿ ಕಾಯ್ದೆ ಜಾರಿಗೆ ತಂದಿದ್ದು, ಪ್ರಾಚಿನ ಹಸ್ತಪ್ರತಿಗಳ ಸಂಗ್ರಹ ಮತ್ತು ಡಿಜಿಟಲೀಕರಣಕ್ಕೆ ವೇಗ ನೀಡಲಾಗುವುದು. ಈ ಪ್ರಕ್ರಿಯೆಯಲ್ಲಿ ಮೂಲ ಹಸ್ತಪ್ರತಿಗಳನ್ನು ಸರ್ಕಾರ ವಶಪಡಿಸಿಕೊಳ್ಳುವುದಿಲ್ಲ. ಅವುಗಳನ್ನು ಡಿಜಿಟಲೀಕರಿಸಿ ಮೂಲಪ್ರತಿಗಳನ್ನು ಮಾಲೀಕರಿಗೆ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಆಯುರ್ವೇದ ಸೇರಿದಂತೆ ಪ್ರಾಚಿನ ಜ್ಞಾನವನ್ನು ಸಂಗ್ರಹಿಸಿ ಸಂರಕ್ಷಿಸುವುದರ ಜೊತೆಗೆ, ಅವುಗಳನ್ನು ಸಂರಕ್ಷಿಸಿಕೊಂಡಿರುವ ವ್ಯಕ್ತಿಗಳಿಗೆ ಅಧಿಕೃತ ಮಾನ್ಯತೆ ನೀಡಲಾಗುವುದು ಎಂದರು.