ಬಾರಕೂರಿನ ಗತವೈಭವ ಮರುಕಳಿಸಲು ಸಮಗ್ರ ಕ್ರಮ: ಸಚಿವ ಹೆಚ್.ಕೆ. ಪಾಟೀಲ್
Wednesday, May 06, 2026
ಐತಿಹಾಸಿಕ ಮಹತ್ವ ಹೊಂದಿರುವ ಬಾರಕೂರಿನ ಕೋಟೆ-ಕೊತ್ತಲ, ಗುಡಿ-ಗೋಪುರ ಹಾಗೂ ಪರಂಪರೆಯನ್ನು ಸಾರುವ ಪುರಾತನ ಆಸ್ತಿಗಳನ್ನು ಸಂರಕ್ಷಿಸಿ, ಅವುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದ ರೀತಿಯಲ್ಲಿ ದುರಸ್ತಿ ಹಾಗೂ ಪುನರುಜ್ಜೀವನ ಕಾರ್ಯ ಕೈಗೊಳ್ಳಲಾಗುವುದು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.
ಬ್ರಹ್ಮಾವರ ತಾಲೂಕಿನ ಬಾರಕೂರಿನ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಸುತ್ತಮುತ್ತಲಿನ ಐತಿಹಾಸಿಕ ತಾಣಗಳ ವೀಕ್ಷಣೆ ಬಳಿಕ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ನಾಡಿನ ಗತವೈಭವ ಮತ್ತು ಇತಿಹಾಸ ಮರೆಯಾಗುತ್ತಿವೆ. ಇತಿಹಾಸದ ಮಹತ್ವ ಸಾರುವ ಪ್ರತಿಯೊಂದು ಕಲ್ಲನ್ನೂ ಸಂರಕ್ಷಿಸುವುದು ನಮ್ಮ ಕರ್ತವ್ಯ. ಇದರಲ್ಲಿ ನಾವು ವಿಫಲರಾಗಬಾರದು ಎಂದು ಅವರು ಹೇಳಿದರು.
ಬಾರಕೂರು ರಾಜ್ಯವನ್ನು ಅಳುಪರು ದೀರ್ಘಕಾಲ ಆಳಿದ ಇತಿಹಾಸ ಜಾಗತಿಕ ಮಟ್ಟದಲ್ಲಿ ಮಹತ್ವದ್ದಾಗಿದೆ. ಶಾಂತಿಯುತ ಆಡಳಿತ ವೈಖರಿಯನ್ನು ಅಳುಪರು ರೂಪಿಸಿದ್ದರು. ಅವರ ಆಡಳಿತ ವ್ಯವಸ್ಥೆ ಮತ್ತು ಪರಂಪರೆಯ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಬಾರಕೂರಿನ ಐತಿಹಾಸಿಕ ಶ್ರೀಮಂತಿಕೆಯನ್ನು ಮರುಸೃಷ್ಟಿಸುವ ಉದ್ದೇಶದಿಂದ ಜಗದೀಶ್ ಶೆಟ್ಟರ್ ಅವರ ನೇತೃತ್ವದಲ್ಲಿ ಅಧಿಕೃತ ಸಮಿತಿ ರಚಿಸಿ, ಪುನರುಜ್ಜೀವನಕ್ಕೆ ಅಗತ್ಯ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಿರುವುದಾಗಿ ತಿಳಿಸಿದರು. ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಬಾರಕೂರಿನ ಗತವೈಭವವನ್ನು ಮತ್ತೆ ವಿಜೃಂಭಿಸುವ ದಿಸೆಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಲಕ್ಕುಂಡಿಯಲ್ಲಿ ಪತ್ತೆಯಾದ ಸುಮಾರು 3,500 ಪ್ರಾಚ್ಯಾವಶೇಷಗಳನ್ನು ಉಲ್ಲೇಖಿಸಿದ ಅವರು, ಅವುಗಳನ್ನು ಸಂಗ್ರಹಿಸಿ ಬಯಲು ಮ್ಯೂಸಿಯಂ ರೂಪಿಸುವ ಯೋಜನೆ ರೂಪಿಸಲಾಗಿದೆ. ಈಗಾಗಲೇ 35 ದೇವಸ್ಥಾನ ಹಾಗೂ 35 ಬಾವಿಗಳನ್ನು ಗುರುತಿಸಿ ಸಂರಕ್ಷಣೆ ಕಾರ್ಯ ನಡೆಯುತ್ತಿದೆ. ಇತಿಹಾಸದಲ್ಲಿ ಉಲ್ಲೇಖವಾಗಿರುವಂತೆ 101 ಬಾವಿ ಮತ್ತು 101 ದೇವಸ್ಥಾನಗಳನ್ನು ಗುರುತಿಸಿ ಅನಾವರಣಗೊಳಿಸುವ ಯೋಜನೆಯೂ ಇದೆ ಎಂದರು.
ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಜಗದೀಶ್ ಶೆಟ್ಟರ್, ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ, ಮೊಳಹಳ್ಳಿ ದಿನೇಶ್, ಶಾಂತಾರಾಮ್ ಶೆಟ್ಟಿ, ಅಳುಪ ಮನೆತನದ ಆಕಾಶ್‌ರಾಜ್ ಜೈನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



