ಉಡುಪಿ ಜಿಲ್ಲೆಗೆ ಕಾಂಗ್ರೆಸ್ ಮಲತಾಯಿ ಧೋರಣೆ: ಮೇ.16ರಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಕಪ್ಪು ಬಾವುಟ ಪ್ರದರ್ಶನ
ಉಡುಪಿ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಧೋರಣೆಯನ್ನು ಖಂಡಿಸಿ ಮೇ.16ರಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಹೇಳಿದ್ದಾರೆ.
ಅವರು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೇ 2023 ರಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಉಡುಪಿ ಜಿಲ್ಲೆಯ ಅಭಿವೃದ್ಧಿಯಲ್ಲಿ ಮಲತಾಯಿ ಧೋರಣೆ ತೋರಿ ಉಡುಪಿ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ.
2013ರಲ್ಲಿ ಉಡುಪಿ ನಗರ ಭಾಗಕ್ಕೆ ಆರಂಭ ಗೊಂಡ ನರ್ಮ ಬಸ್ ಯೋಜನೆಯಲ್ಲಿ 40 ಕ್ಕೂ ಹೆಚ್ಚು ಬಸ್ಸುಗಳು ಇದ್ದು ಇಂದು ಸರ್ಕಾರ ಗ್ಯಾರಂಟಿ ಯೋಜನೆ ಅಡಿ ಉಚಿತ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಶೇಕಡ 50 ಬಸ್ ಗಳನ್ನು ಕಡಿತಗೊಳಿಸಿದೆ.
ಉಡುಪಿ ಜಿಲ್ಲಾ ಆಸ್ಪತ್ರೆ ಕಾಮಗಾರಿ ಪೂರ್ಣಗೊಳಿಸದೆ ಜಿಲ್ಲೆಯ ಬಡ ರೋಗಿಗಳ ಜೀವದೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಆಟವಾಡುತ್ತಿದೆ. ಉಡುಪಿಯ ಪರ್ಯಾಯಕ್ಕೆ ಅನುದಾನ ನೀಡುವ ಭರವಸೆಯನ್ನು ನೀಡಿ ನಂತರ ಬಿಡಿಗಾಸು ನೀಡದೆ ಹಿಂದೂ ಸಮಾಜಕ್ಕೆ ಅನ್ಯಾಯ ಮಾಡಿದೆ.
ಕಂದಾಯ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಭೂಮಾಪಕರ ಬಹುಕಾಲದ ಬೇಡಿಕೆಯನ್ನು ಈಡೇರಿಸದೆ ಸತತ ಎರಡು ತಿಂಗಳುಗಳಿಂದ ಭೂಮಾಪಕರು ಮುಷ್ಕರ ನಡೆಸುತ್ತಿದ್ದು, ಜನರಿಗೆ ಅನ್ಯಾಯವಾಗುತ್ತಿದ್ದರೂ ಜಾಣ ಕುರುಡುತನ ಪ್ರದರ್ಶಿಸುತ್ತಿ ದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ದಿನದಿಂದ ನಿರ್ಲಕ್ಷಿಸುತ್ತ ಬಂದಿದ್ದು ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಅಗ್ರಹಿಸಿ ಮೇ.16ರಂದು ಬೆಳಿಗ್ಗೆ 10 ಗಂಟೆಗೆ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಜೆಪಿ ಯುವ ಮೋರ್ಚಾ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಯುವಮೋರ್ಚಾದ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಅಭಿರಾಜ್ ಸುವರ್ಣ ಮೊದಲಾದವ್ರು ಉಪಸ್ಥಿತರಿದ್ದರು.
