ನೀಟ್-ಯುಜಿ ಪರೀಕ್ಷೆ ರದ್ದತಿಗೆ ಕೇಂದ್ರಸರ್ಕಾರದ ವೈಫಲ್ಯವೇ ಕಾರಣ: ಸೌರಭ್ ಬಲ್ಲಾಳ್
ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರೀ ಅಕ್ರಮಗಳಿಂದಾಗಿ ನೀಟ್-ಯುಜಿ ಪರೀಕ್ಷೆ ರದ್ದಾಗಲು ಕೇಂದ್ರ ಸರ್ಕಾರದ ವೈಫಲ್ಯವೇ ಕಾರಣ ಎಂದು ಎನ್‌ಎಸ್‌ಯುಐ ಉಡುಪಿ ಜಿಲ್ಲಾ ಸಮಿತಿ ಅಧ್ಯಕ್ಷ ಸೌರಭ್ ಬಲ್ಲಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬಿಜೆಪಿ ನೇತೃತ್ಯದ ಕೇಂದ್ರ ಸರ್ಕಾರದಡಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ನೀಟ್-ಯುಜಿ 2026 ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಭಾರೀ ಅಕ್ರಮಗಳಿಂದಾಗಿ ರದ್ದಾಗಿದೆ. 3 ವರ್ಷದಲ್ಲಿ 2ನೇ ಬಾರಿ ಲಕ್ಷಾಂತರ ಪ್ರಾಮಾಣಿಕ, ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಕನಸುಗಳನ್ನು ಕೋಚಿಂಗ್ ಮಾಫಿಯಾ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಹರಾಜು ಹಾಕಲಾಗಿದೆ. ನ್ಯಾಯಯುತ, ಪಾರದರ್ಶಕ ರಾಷ್ಟ್ರೀಯ ಪರೀಕ್ಷೆ ನಡೆಸುವಲ್ಲಿ ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ಅಸಮರ್ಥತೆಯನ್ನು ಸಾಬೀತುಪಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ, ದಕ್ಷಿಣ ಕನ್ನಡ ಮತ್ತು ಕರ್ನಾಟಕದಾದ್ಯಂತ ವಿದ್ಯಾರ್ಥಿಗಳು 2 ವರ್ಷ ತಯಾರಿ ನಡೆಸಿ, ಕೋಚಿಂಗ್‌ಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಈಗ ಅನಿಶ್ಚಿತತೆ ಮತ್ತು ತೀವ್ರ ಮಾನಸಿಕ ಆಘಾತ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ತಪ್ಪಿಲ್ಲದೆ ಮರು- ಪರೀಕ್ಷೆ ಅನ್ಯಾಯದ ಶಿಕ್ಷೆಯಾಗಿದೆ. NTA ಪದೇ ಪದೇ ವಿಫಲವಾಗಿ ಎಲ್ಲಾ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ಕೋಚಿಂಗ್ ಮಾಫಿಯಾದ ಕೈಗೊಂಬೆಯಾಗಿರುವ NTA ಯನ್ನು ತಕ್ಷಣ ವಿಸರ್ಜಿಸಬೇಕೆಂದು ಆಗ್ರಹಿಸಿದರು.
ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಕೋಚಿಂಗ್ ಮಾಫಿಯಾ-NTA ನಂಟನ್ನು ಬಯಲಿಗೆಳೆಯಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯ ನ್ಯಾಯಾಂಗ ಆಯೋಗ ರಚಿಸಿ, ಮಾದರಿ ಶಿಕ್ಷೆ ನೀಡಬೇಕು. ಅಲ್ಲದೇ ಮಾನಸಿಕ ಕಿರುಕುಳ, ಪ್ರಯಾಣ ಮತ್ತು ಕೋಚಿಂಗ್ ನಷ್ಟಕ್ಕೆ ಪ್ರತಿ ನೀಟ್ ಆಕಾಂಕ್ಷಿಗೆ ಕೇಂದ್ರ ಸರ್ಕಾರವು 50,000 ರೂ. ಪರಿಹಾರ ನೀಡಬೇಕು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕರ್ನಾಟಕಕ್ಕೆ ಪ್ರತ್ಯೇಕ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಈ ಬಗ್ಗೆ ಕೇಂದ್ರ ಸಚಿವರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದ ಸೌರಭ್ ಬಲ್ಲಾಳ್, ಖಾಸಗಿ ಕೋಚಿಂಗ್ ಲಾಬಿಗಳ ಲಾಭಕ್ಕಾಗಿ ಕೇಂದ್ರದ ಬಿಜೆಪಿ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿದ್ದು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಹೇಳಿದರು, ನ್ಯಾಯ ವಿಳಂಬವಾದರೆ ಉಡುಪಿ, ಕುಂದಾಪುರ, ಕಾರ್ಕಳ ಮತ್ತು ಬ್ರಹ್ಮಾವರದಲ್ಲಿ ಜಿಲ್ಲಾವ್ಯಾಪಿ ಪ್ರತಿಭಟನೆ ಹಮ್ಕಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಎನ್‌ಎಸ್‌ಯುಐ ಪ್ರಮುಖರಾದ ಶರತ್ ಕುಂದರ್, ಅನೀಶ್ ಕುಮಾರ್, ಅಧ್ಯಾನ್ ಮೊದಲಾದವರು ಉಪಸ್ಥಿತರಿದ್ದರು.