-->
ಮೇ. 17:  ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ

ಮೇ. 17: ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭ


ಯುವವಾಹಿನಿ(ರಿ) ಉಡುಪಿ ಘಟಕದ ಆಶ್ರಯದಲ್ಲಿ ಮೇ. 17 ರಂದು  ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭವು ಉಡುಪಿ ಚಿಟ್ನಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‌ನ ಲಕ್ಷ್ಮೀ ಸಭಾಭವನದಲ್ಲಿ ಜರಗಲಿದೆ ಎಂದು ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ ಹೇಳಿದರು. 

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಡಾ.ಅಭಯ ಕುಮಾರ್ ರವರಿಗೆ ನೀಡಲಾಗುವುದು. ಡಾ.ಅಭಯ ಕುಮಾರ್ ಅವರು,  ಕನ್ನಡ ಪ್ರಾಧ್ಯಾಪಕರಾಗಿ, ಸಂಶೋದಕರಾಗಿ, ಜಾನಪದ ವಿದ್ವಾಂಸರಾಗಿ ಗುರುತರ ಸಾಧನೆಯನ್ನು ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗದಲ್ಲಿ ಸಂಯೋಜಕರಾಗಿ, ಅಧ್ಯಕ್ಷರಾಗಿ ಕಾರ್ಯವನ್ನು ನಿರ್ವಹಿಸಿದವರು. ಡಾ. ಪುರುಷೋತ್ತಮ ಬಿಳಿಮಲೆಯವರ ಮಾರ್ಗದರ್ಶನದಲ್ಲಿ ಮುಗೇರರ ಕುಣಿತಗಳು ಹಾಗೂ ಆಚರಣೆಗಳು ಎಂಬ ವಿಷಯದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದ ಶ್ರೀಯುತರು ಪ್ರತಿಷ್ಠಿತ ಕಾಮನ್‌ವೆಲ್ತ್ ಪೇಲೋಶಿಪ್ ಪಡೆದ ವಿರಳಾತಿ ಸಂಶೋಧಕರಲ್ಲಿ ಒಬ್ಬರು. 2001 ರಲ್ಲಿ ಇಂಗ್ಲೆಂಡಿನ ಬ್ರಿಟಿಷ್ ಕೌನ್ಸಿಲ್ ಧನಸಹಾಯದಲ್ಲಿ ಪೋಸ್ಟ್ ಡಾಕ್ಟರೇಟ್ ಸಂಶೋಧನೆಯನ್ನು ನಡೆಸಿದ ಹಿನ್ನಲೆಯುಳ್ಳವರು. ಇವರ ಅನೇಕ ಚಿಂತನಾ ಪೂರ್ಣ ಅಧ್ಯಯನಗಳು, ತಾತ್ವಿಕ ಗಟ್ಟಿತನದ ಸಂಶೋಧನೆಗಳ ಮೂಲಕ ಹದಿಮೂರು ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿ ಮಾರ್ಗದರ್ಶನವನ್ನು ನೀಡಿರುತ್ತಾರೆ. ಸಂಶೋದನಾತ್ಮಕ ಲೇಖನಗಳ ಪ್ರಕಟನೆ, ಜಾನಪದ ಹಾಗೂ ಸಾಹಿತ್ಯಗೋಷ್ಠಿಗಳಲ್ಲಿ ಪ್ರಬುದ್ಧವಾದ ಪ್ರಬಂಧಗಳನ್ನು ಮಂಡಿಸಿದವರು. ರಾಷ್ಟ್ರೀಯ,ಅಂತರ್‌ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವಿಕೆ, ಸಂಪನ್ಮೂಲ ವ್ಯಕ್ತಿಯಾಗಿ ನಾಡುನುಡಿಯ ಕಾಳಜಿಯ ಪ್ರತಿನಿಧಿ ಪ್ರೊ ಅಭಯಕುಮಾರ್‌ ಅವರದ್ದಾಗಿದೆ ಎಂದರು. 

ಜಾನಪದ ಕಲಾವಿದ ಪ್ರಶಸ್ತಿಯನ್ನು ಚಿತ್ರಕಲಾ ಶಿಕ್ಷಕ ಶೇಖರ ಪೂಜಾರಿಯವರಿಗೆ ನೀಡಲಾಗುವುದು. ಶೇಖರ ಪೂಜಾರಿ ಅವರು ಕಾಲೇಜು ಶಿಕ್ಷಣದೊಂದಿಗೆ ಚಿತ್ರಕಲೆ ಪದವಿಯನ್ನು ಪಡೆದು ನೆಹರೂ ಪ್ರೌಢಶಾಲೆ ಅಲೆವೂರು ಇಲ್ಲಿ ಕಲಾಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಹಾಗೂ ಭಾರತ್ ಸೌಟ್ ಮತ್ತು ಗೈಡ್ಸ್ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ 45 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ಜಿಲ್ಲಾ ಸಂಸ್ಥೆ ಉಡುಪಿ ಇದರ ಕಾರ್ಯದರ್ಶಿಯಾಗಿ 9 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಕರ್ನಾಟಕ ಸರಕಾರದ ರಾಜ್ಯಪಾಲರಾದ ವಜೂಬಾಯಿ ವಾಲರಿಂದ ಪ್ರಶಸ್ತಿಯನ್ನು ಪಡೆದಿರುತ್ತಾರೆ ಎಂದರು.

ಉಡುಪಿ ಯುವವಾಹಿನಿಯು ಹೆಸರಾಂತ ಸಾಹಿತಿಗಳು, ಚಿಂತಕರಾದ ಮುದ್ದು ಮೂಡುಬೆಳ್ಳೆ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯಿಂದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗಣ್ಯರ ವಿವರಗಳನ್ನು ಕಲೆ ಹಾಕಿ ಅಯ್ಕೆ ಪ್ರಕ್ರಿಯೆಯನ್ನು ನಡೆಸಿದೆ. ಪ್ರಶಸ್ತಿಯು ತಲಾ 12000 ನಗದಿನೊಂದಿಗೆ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಹೊಂದಿದೆ.

ಪ್ರಶಸ್ತಿ ಪ್ರದಾನವನ್ನು ಹಿರಿಯ ಸಾಹಿತಿಗಳಾದ ಅಂಶುಮಾಲಿ ಮಣಿಪಾಲ ನೆರವೇರಿಸಲಿದ್ದಾರೆ. ಅಭಿನಂದನಾ ಭಾಷಣವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ, ಮಂಗಳೂರು ಇಲ್ಲಿನ ಪ್ರಾಧ್ಯಾಪಕರಾದ ಡಾ. ದುಗ್ಗಪ ಕಜೆಕಾರ್ ರವರು ಮಾಡಲಿದ್ದು, ಮುಖ್ಯ ಅತಿಥಿಯಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ = ಅಶೋಕ್ ಕುಮಾರ್ ಪಡ್ಡು ಹಾಗೂ ವೈಕುಂಠ ಬಾಳಿಗಾ ಕಾನೂನು ಕಾಲೇಜು, ಉಡುಪಿ ಇಲ್ಲಿನ ಪ್ರಾಂಶುಪಾಲರಾದ ಡಾ.ಸುರೇಖಾ ಕೆ. ಭಾಗವಹಿಸಲಿದ್ದಾರೆ. ಹಾಗೂ 2021ನೇ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ವಿದ್ವಾಂಸರಾದ ಶ್ರೀ ಬನ್ನಂಜೆ ಬಾಬು ಅಮೀನ್ ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿರುತ್ತಾರೆ ಎಂದರು 

ಬನ್ನಂಜೆ ಬಾಬು ಅಮೀನ್ ರವರು ಆರಂಭಿಸಿದ ಪ್ರಶಸ್ತಿಯನ್ನು ಕಮ್ಮಲಜೆ ಜಾನಪದ ಪ್ರಕಾಶನವು 8 ವರ್ಷಗಳಿಂದ ನೀಡಿದ್ದು, ಕಳೆದ 6 ವರ್ಷಗಳಿಂದ ಯುವವಾಹಿನಿ ಉಡುಪಿ ಘಟಕವು ನೀಡುತ್ತಿದೆ. ಮಂಗಳೂರು ಕೇಂದ್ರ ಸಮಿತಿಯು ದಿ। ವಿಶುಕುಮಾ‌ರ್ ಸಾಹಿತ್ಯ ಪ್ರಶಸ್ತಿಯನ್ನು ಹಲವಾರು ವರ್ಷಗಳಿಂದ ನೀಡುತ್ತಾ ಬರುತ್ತಿದ್ದು, ಘಟಕಗಳಲ್ಲಿ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಿರುವುದು ಉಡುಪಿ ಘಟಕದ ವಿಶೇಷತೆಯಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷ, ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ , ರಘುನಾಥ ಮಾಬೆನ್, ಸಂತೋಷ್ ಕುಮಾರ್ ಹಾಗೂ ಕಾರ್ಯದರ್ಶಿ ವೀಕ್ಷಿತ್ ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article