-->
ಟ್ರೇಡಿಂಗ್ ಹೆಸರಿನಲ್ಲಿ ಮಹಿಳೆಗೆ 29.42 ಲಕ್ಷ ರೂ. ಆನ್‌ಲೈನ್ ವಂಚನೆ

ಟ್ರೇಡಿಂಗ್ ಹೆಸರಿನಲ್ಲಿ ಮಹಿಳೆಗೆ 29.42 ಲಕ್ಷ ರೂ. ಆನ್‌ಲೈನ್ ವಂಚನೆ


ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶೋಭಾ ಎಂಬವರಿಗೆ ಜನವರಿ 13ರಂದು ಫೇಸ್‌ಬುಕ್‌ನಲ್ಲಿ ಜಾಹಿರಾತೊಂದು ಕಾಣಿಸಿಕೊಂಡಿದ್ದು, ಅದರಲ್ಲಿ 21 ಸಾವಿರ ರೂ. ಹೂಡಿಕೆ ಮಾಡಿದರೆ ಪ್ರತಿ ತಿಂಗಳು 28 ಸಾವಿರ ರೂ. ಆದಾಯ ಸಿಗುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಇದನ್ನು ನಂಬಿದ ಅವರು 21 ಸಾವಿರ ರೂ. ಪಾವತಿಸಿ ನೋಂದಣಿ ಮಾಡಿಕೊಂಡಿದ್ದರು.

ಜನವರಿ 14ರಂದು ಜಿತೇಶ್ ಕುಮಾರ್ ಎಂಬಾತ ಆರ್ಥಿಕ ಸಲಹೆಗಾರನೆಂದು ಹೇಳಿಕೊಂಡು ಕರೆ ಮಾಡಿ, ಹೂಡಿಕೆ ಮಾಡಿದ 21 ಸಾವಿರ ರೂ.ಗೆ ಎರಡು ದಿನಗಳಲ್ಲಿ 1,200 ರೂ. ಲಾಭ ಬಂದಿದೆ ಎಂದು ತಿಳಿಸಿದ್ದಾನೆ. ಸಾಲ ತೀರಿಸಲು ಟ್ರೇಡಿಂಗ್ ಮಾಡುವುದಾಗಿ ಶೋಭಾ ಹೇಳಿದ ವೇಳೆ, ಚಿನ್ನದ ಮೇಲೆ 10 ಲಕ್ಷ ರೂ. ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ ಎಂದು ಆರೋಪಿಯು ನಂಬಿಸಿದ್ದಾನೆ ಎನ್ನಲಾಗಿದೆ.

ಅದರಂತೆ ಶೋಭಾ ಅವರು ತಮ್ಮ ಚಿನ್ನವನ್ನು ಅಡವಿಟ್ಟು, ಜನವರಿ 21ರಿಂದ ಮೇ 9ರವರೆಗೆ ಹಂತ ಹಂತವಾಗಿ ಒಟ್ಟು 29,42,940 ರೂ. ಹಣವನ್ನು ಆರೋಪಿಗಳ ವಿವಿಧ ಬ್ಯಾಂಕ್ ಖಾತೆಗಳಿಗೆ ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದರು. ಆದರೆ ಬಳಿಕ ಆರೋಪಿಗಳು ಹಣವನ್ನು ಹಿಂದಿರುಗಿಸದೇ ವಂಚನೆ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

Ads on article

Advertise in articles 1

advertising articles 2

Advertise under the article