ಮಾಹೆಯ 8ನೇ ಕುಲಪತಿಯಾಗಿ ಡಾ. ಶರತ್ ಕೆ. ರಾವ್ ಅಧಿಕಾರ ಸ್ವೀಕಾರ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ 8ನೇ ಕುಲಪತಿಯಾಗಿ ಡಾ. ಶರತ್ ಕೆ. ರಾವ್ ಅವರು ಅಧಿಕಾರ ಸ್ವೀಕರಿಸಿದರು.
ಪ್ರಖ್ಯಾತ ಮೂಳೆತಜ್ಞರು ಹಾಗೂ ಶೈಕ್ಷಣಿಕ ಆಡಳಿತಗಾರರಾಗಿರುವ ಡಾ. ಶರತ್ ರಾವ್ ಅವರು ವೈದ್ಯಕೀಯ ಕ್ಷೇತ್ರದಲ್ಲಿ ನಾಲ್ಕು ದಶಕಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಮಾರ್ಚ್ ತಿಂಗಳಲ್ಲೇ ಇವರ ನೇಮಕಾತಿ ಘೋಷಿಸಲಾಗಿತ್ತು. ಮಾಹೆಯ ಶೈಕ್ಷಣಿಕ ಗುಣಮಟ್ಟವನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಇವರ ನಾಯಕತ್ವವು ಮಹತ್ವದ್ದಾಗಿದೆ.
ವೈದ್ಯಕೀಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಲಂಡನ್‌ನ ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಸಂಸ್ಥೆಯು 2025ರ ಜುಲೈ 8ರಂದು ಡಾ. ರಾವ್ ಅವರಿಗೆ ಪ್ರತಿಷ್ಠಿತ 'ಗೌರವ ಫೆಲೋಶಿಪ್' (ಎಫ್‌ಆರ್‌ಸಿಪಿ) ನೀಡಿ ಗೌರವಿಸಿದೆ. ಮೈಸೂರು ವಿಶ್ವವಿದ್ಯಾಲಯದಿಂದ ಎಂಬಿಬಿಎಸ್, ಮಂಗಳೂರು ವಿಶ್ವವಿದ್ಯಾಲಯದಿಂದ ಡಿ.ಆರ್ಥೋ ಮತ್ತು ಎಂ.ಎಸ್ ಪದವಿಗಳನ್ನು ಪಡೆದ ಇವರು, 1988ರಲ್ಲಿ ಕೆಎಂಸಿ ಮಣಿಪಾಲದಲ್ಲಿ ಸಹಾಯಕ ಉಪನ್ಯಾಸಕರಾಗಿ ವೃತ್ತಿಜೀವನ ಆರಂಭಿಸಿದರು.
ಕೆಎಂಸಿ ಮಂಗಳೂರಿನ ಹಳೆಯ ವಿದ್ಯಾರ್ಥಿಯಾಗಿರುವ ಇವರು ನಾಲ್ಕು ದಶಕಗಳ ಕಾಲ ಸಂಸ್ಥೆಯ ವಿವಿಧ ಸ್ತರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಎಂಸಿ ಮಣಿಪಾಲದ ಮೂಳೆಚಿಕಿತ್ಸೆ ವಿಭಾಗ ಮುಖ್ಯಸ್ಥರಾಗಿ (2009-2014), ಅಸೋಸಿಯೇಟ್ ಡೀನ್ (2015-2019) ಹಾಗೂ ಡೀನ್ (2019-2023) ಆಗಿ ಕಾರ್ಯನಿರ್ವಹಿಸಿದ್ದಾರೆ. 2023ರಿಂದ 2026ರವರೆಗೆ ಮಾಹೆಯ ಸಹ-ಕುಲಪತಿ (ಆರೋಗ್ಯ ವಿಜ್ಞಾನ) ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.
ಸಹ-ಕುಲಪತಿಯಾಗಿದ್ದ ಅವಧಿಯಲ್ಲಿ ಡಾ. ರಾವ್ ಅವರು ಶೈಕ್ಷಣಿಕ ಆಡಳಿತವನ್ನು ಬಲಪಡಿಸುವುದು, ಸಂಶೋಧನೆಗೆ ಉತ್ತೇಜನ ನೀಡುವುದು ಮತ್ತು ಆರೋಗ್ಯ ಸೇವೆಯ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಕುಲಪತಿಯಾಗಿ ಅವರ ನೇಮಕವು ಮಾಹೆಯ ಶೈಕ್ಷಣಿಕ ಶ್ರೇಷ್ಠತೆ ಮತ್ತು ಜಾಗತಿಕ ಮಟ್ಟದ ಮನ್ನಣೆಯನ್ನು ಮುಂದುವರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ವೈದ್ಯಕೀಯ ವಲಯದಲ್ಲಿ ಅಪಾರ ಗೌರವಕ್ಕೆ ಪಾತ್ರರಾಗಿರುವ ಡಾ. ರಾವ್ ಅವರು ಸಂಕೀರ್ಣ ಟ್ರೋಮಾ, ಕೀಲು ಮರುಜೋಡಣೆ ಮತ್ತು ಮೊಣಕಾಲು ಆರ್ಥ್ರೋಸ್ಕೋಪಿ ಚಿಕಿತ್ಸೆಯಲ್ಲಿ ಪರಿಣತಿ ಹೊಂದಿದ್ದಾರೆ. ಇವರು ಕರ್ನಾಟಕ ಆರ್ಥೋಪೆಡಿಕ್ ಅಸೋಸಿಯೇಷನ್ ಹಾಗೂ ದಕ್ಷಿಣ ಭಾರತದ ಆರ್ಥೋಪೆಡಿಕ್ ಅಸೋಸಿಯೇಷನ್ (OASIS) ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಅಲ್ಲದೆ, ಎಒ ಟ್ರೋಮಾ ಇಂಡಿಯಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಪ್ರತಿಷ್ಠಿತ ವೈದ್ಯಕೀಯ ಜರ್ನಲ್‌ಗಳಲ್ಲಿ ಇವರ 100ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ ಹಲವು ಕಡೆಗಳಲ್ಲಿ ಉಪನ್ಯಾಸ ಮತ್ತು ಕಾರ್ಯಾಗಾರಗಳನ್ನು ನಡೆಸಿದ್ದಾರೆ. ವೈದ್ಯಕೀಯ ಶಿಕ್ಷಣ ಮತ್ತು ಮೂಳೆಚಿಕಿತ್ಸಾ ಕ್ಷೇತ್ರದಲ್ಲಿ ಜಾಗತಿಕ ಸಹಯೋಗವನ್ನು ಬಲಪಡಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದಾರೆ.
ಡಾ| ಶರತ್ ರಾವ್ ಅವರ ನೇಮಕ ಕುರಿತು ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ. ರಂಜನ್ ಆರ್. ಪೈ ಅವರು, ‘ಮಾಹೆಯ ಬಗ್ಗೆ ಡಾ. ಶರತ್ ಕೆ. ರಾವ್ ಅವರಿಗಿರುವ ಆಳವಾದ ಅರಿವು, ಎಲ್ಲರನ್ನು ಒಳಗೊಂಡ ನಾಯಕತ್ವ ಹಾಗೂ ಶ್ರೇಷ್ಠತೆ ಸಾಧಿಸುವಲ್ಲಿ ಅವರಿಗಿರುವ ಬದ್ಧತೆಯು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾಗಿ ಜಾಗತಿಕ ಮಟ್ಟದಲ್ಲಿ ಗೌರವ ಹೊಂದಿರುವ ಮಾಹೆಯ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲಿದೆ ಎಂಬ ವಿಶ್ವಾಸ ನನಗಿದೆʼ ಎಂದು ತಿಳಿಸಿದರು.
ಮಾಹೆಯ ಸಹ ಕುಲಾಧಿಪತಿ ಡಾ. ಹೆಚ್.ಎಸ್. ಬಲ್ಲಾಳ್ ಅವರು, ‘ಡಾ. ಶರತ್ ಕೆ. ರಾವ್ ಅವರ ನೇಮಕಾತಿಯು ಮಾಹೆಯ ಶೈಕ್ಷಣಿಕ ನಾಯಕತ್ವ ಮತ್ತು ಮೌಲ್ಯಗಳಿಗೆ ನೀಡುವ ಪ್ರಾಮುಖ್ಯವನ್ನು ಪ್ರತಿಬಿಂಬಿಸುತ್ತದೆ. ಸಂಸ್ಥೆಯ ಕುರಿತು ಅವರಿಗಿರುವ ಆಳವಾದ ತಿಳುವಳಿಕೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿರುವ ಅದ್ವಿತೀಯ ಕೊಡುಗೆಯು, ಮಾಹೆಯನ್ನು ಜಾಗತಿಕ ಮಟ್ಟದ ಮುಂಚೂಣಿ ವಿಶ್ವವಿದ್ಯಾಲಯವನ್ನಾಗಿ ಬಲಪಡಿಸಲು ಸಹಕಾರಿಯಾಗಲಿದೆ' ಎಂದು ಅಭಿಪ್ರಾಯಪಟ್ಟರು.
ನೂತನ ಜವಾಬ್ದಾರಿ ಸ್ವೀಕರಿಸಿ ಮಾತನಾಡಿದ ಡಾ. ಕೆ. ಶರತ್ ರಾವ್ ಅವರು, ʼವೈಯಕ್ತಿಕ ಮತ್ತು ವೃತ್ತಿಜೀವನದ ಅವಿಭಾಜ್ಯ ಅಂಗವಾಗಿರುವ ಮಾಹೆಯನ್ನು ಮುನ್ನಡೆಸುವ ಜವಾಬ್ದಾರಿ ದೊರೆತಿರುವುದು ಹೆಮ್ಮೆಯ ವಿಷಯ. ಹಿಂದಿನವರು ಹಾಕಿರುವ ಬಲಿಷ್ಠ ಬುನಾದಿಯ ಮೇಲೆ ಸಂಸ್ಥೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಗುರಿ ಇದೆ. ಎಲ್ಲರ ಸಹಕಾರದೊಂದಿಗೆ ಶಿಕ್ಷಣ, ಸಂಶೋಧನೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಮಾಹೆಯನ್ನು ಜಾಗತಿಕ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲು ಬದ್ಧನಾಗಿದ್ದೇನೆ. ಸಾಮಾಜಿಕ ಕಳಕಳಿ ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದೇ ನನ್ನ ಮುಖ್ಯ ಉದ್ದೇಶ' ಎಂದರು.
ಜುಲೈ 1, 2020ರಂದು ಮಾಹೆಯ 7ನೇ ಕುಲಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಲೆಫ್ಟಿನೆಂಟ್ ಜನರಲ್ (ಡಾ.) ಎಂ. ಡಿ. ವೆಂಕಟೇಶ್ ಅವರು ತಮ್ಮ ಅಧಿಕಾರವಧಿಯ ಬಗ್ಗೆ ಮಾತನಾಡಿ, 'ಮಾಹೆಯು ಮಹತ್ವದ ಬೆಳವಣಿಗೆ ಮತ್ತು ರೂಪಾಂತರದ ಕಾಲಘಟ್ಟದಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ ಮತ್ತು ಜಾಗತಿಕ ಮಟ್ಟದಲ್ಲಿ ಸಂಸ್ಥೆಯನ್ನು ವಿಸ್ತರಿಸುವಲ್ಲಿ ಸಾಧಿಸಿರುವ ಪ್ರಗತಿಯ ಬಗ್ಗೆ ನನಗೆ ಹೆಮ್ಮೆಯಿದೆ. ಡಾ. ರಾವ್ ಅವರು ಈ ಸಂಸ್ಥೆಯ ಪರಂಪರೆಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿʼ ಎಂದು ಹಾರೈಸಿದರು.
ಡಾ. ಶರತ್ ರಾವ್ ಅವರ ನೇಮಕದೊಂದಿಗೆ ಮಾಹೆಯು ಹೊಸ ಮನ್ವಂತರಕ್ಕೆ ಕಾಲಿಟ್ಟಿದೆ. ಶಿಕ್ಷಣ, ಸಂಶೋಧನೆ, ಆರೋಗ್ಯ ಸೇವೆ ಮತ್ತು ಸಾಮಾಜಿಕ ತೊಡಗಿಸಿಕೊಳ್ಳುವಿಕೆಯಲ್ಲಿ ತನ್ನದೇ ಆದ ಶ್ರೇಷ್ಠ ಪರಂಪರೆಯನ್ನು ಹೊಂದಿರುವ ಈ ಸಂಸ್ಥೆಯು, ನೂತನ ನಾಯಕತ್ವದಲ್ಲಿ ತನ್ನ ಗುಣಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಬದ್ಧವಾಗಿದೆ. ಈ ಬದಲಾವಣೆಯು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಹೆಯ ಘನತೆಯನ್ನು ಮತ್ತಷ್ಟು ಬಲಪಡಿಸಲು ಸನ್ನದ್ಧವಾಗಿದೆ.