ಹಿರಿಯ ಯಕ್ಷಗಾನ ಭಾಗವತ ಕಪ್ಪೆಕೆರೆ ಸುಬ್ರಾಯ ನಿಧನ
ಲಯಬ್ರಹ್ಮರೆಂದೇ ಖ್ಯಾತರಾಗಿದ್ದ ಬಡಗುತಿಟ್ಟಿನ ಅಗ್ರಮಾನ್ಯ ಸಾಂಪ್ರದಾಯಿಕ ಭಾಗವತ ಕಪ್ಪೆಕೆರೆ ಸುಬ್ರಾಯ ಈಶ್ವರ ಹೆಗಡೆ (79) ಅವರು ಇಂದು ನಿಧನರಾದರು.
ಕಳೆದ ಕೆಲವು ತಿಂಗಳುಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಐದು ದಶಕಗಳ ಕಾಲ ವಿಶಿಷ್ಟ ಸೇವೆ ಸಲ್ಲಿಸಿದ್ದ ಅವರು, ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ನೆಬ್ಬೂರು ನಾರಾಯಣ ಹೆಗಡೆ, ಕರ್ಕಿ ಸತ್ಯನಾರಾಯಣ ಹಾಗೂ ಪ್ರಭಾಕರ ಭಂಡಾರಿ ಅವರಂತಹ ಶ್ರೇಷ್ಠ ಕಲಾವಿದರೊಂದಿಗೆ ರಂಗ ಹಂಚಿಕೊಂಡಿದ್ದರು.
ಮರವಂತೆ ನರಸಿಂಹ ದಾಸ ಮತ್ತು ಎಂ. ನಾರ್ಣಪ್ಪ ಉಪ್ಪೂರು ಅವರಿಂದ ಪ್ರೇರಣೆ ಪಡೆದಿದ್ದ ಅವರು, ಗುಂಡಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು ಹಾಗೂ ಪಂಚಲಿಂಗ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದರು.
ಅಪಾರ ಪೌರಾಣಿಕ ಜ್ಞಾನ, ಅದ್ಭುತ ತಾಳ-ಲಯ ಪ್ರಾವೀಣ್ಯ ಮತ್ತು ಪ್ರಸಂಗ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದ ಕಪ್ಪೆಕೆರೆ ಸುಬ್ರಾಯ ಅವರು ಯಕ್ಷಗಾನದ ಮುಮ್ಮೇಳದ ಕಲಾವಿದರಿಗೆ ಅತ್ಯಂತ ಪ್ರಿಯ ಭಾಗವತರಾಗಿದ್ದರು. ಯಕ್ಷಗಾನ ಗುರುಗಳಾಗಿಯೂ ಹಲವು ಕಡೆ ತರಗತಿಗಳನ್ನು ನಡೆಸಿ ಅನೇಕ ಶಿಷ್ಯರನ್ನು ಬೆಳೆಸಿದ್ದರು.
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿದ್ದ ಅವರಿಗೆ ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯ ‘ಯಕ್ಷಮಂಗಲ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಯಕ್ಷಗಾನ ಕಲಾರಂಗ ಉಪ್ಪೂರು ನಾರ್ಣಪ್ಪರ ನೆನಪಿನ ಪ್ರಶಸ್ತಿ ನೀಡಿ ಸನ್ಮಾನಿಸಿತ್ತು. ಕಳೆದ ವರ್ಷ ಯಕ್ಷಗಾನ ಕಲಾರಂಗದ ಸುವರ್ಣ ಪುರಸ್ಕಾರಕ್ಕೂ ಭಾಜನರಾಗಿದ್ದರು.
ಅವರ ನಿಧನಕ್ಕೆ ಯಕ್ಷಗಾನ ಕಲಾರಂಗ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.