ಉಡುಪಿ ಧರ್ಮಪ್ರಾಂತದ ನೂತನ ವಿಕಾರ್ ಜನರಲ್ ಆಗಿ ಫಾ.ಫ್ರಾನ್ಸಿಸ್ ಝೇವಿಯರ್ ನೇಮಕ
ಧರ್ಮಪ್ರಾಂತದ ನೂತನ ವಿಕಾರ್ ಜನರಲ್ (ಶ್ರೇಷ್ಠಗುರು) ಆಗಿ ಫಾ.ಫ್ರಾನ್ಸಿಸ್ ಝೇವಿಯರ್ ಲೂವಿಸ್ ಅವರನ್ನು ನೇಮಕಗೊಳಿಸಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ರೆ.ಫಾ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ಆದೇಶ ಹೊರಡಿಸಿದ್ದಾರೆ.
ಫಾ.ಫ್ರಾನ್ಸಿಸ್ ಝೇವಿಯರ್ ಲೂವಿಸ್ ಪ್ರಸಕ್ತ ಕಲತ್ತೂರು ಚರ್ಚಿನ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೇ 2ರಂದು ಬಿಷಪ್ ಹೌಸ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಫಾ.ಫ್ರಾನ್ಸಿಸ್ ಝೇವಿರ್ಯ ಲೂವಿಸ್ ಉಡುಪಿ ಧರ್ಮಪ್ರಾಂತದ ವಿಕಾರ್ ಜನರಲ್ ಹುದ್ದೆ ಸ್ವೀಕರಿಸಿದರು. ಉಡುಪಿ ಧರ್ಮಾಧ್ಯಕ್ಷ ರೆ.ಫಾ.ಡಾ.ಲೆಸ್ಲಿ ಕ್ಲಿಫರ್ಡ್ ಡಿಸೋಜ ಪ್ರಾರ್ಥನಾ ಸಭೆ ಹಾಗೂ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಧರ್ಮಪ್ರಾಂತದ ಚಾನ್ಸಲರ್ ಫಾ.ಸ್ಟೀಫನ್ ಡಿಸೋಜ, ಕಾಲೇಜ್ ಆಫ್ ಕನ್ಸಲ್ಟರ್ಸ್ ಸದಸ್ಯ ಫಾ. ಜಿತೇಶ್ ಕ್ಯಾಸ್ಟೆಲಿನೋ ಮತ್ತು ಪ್ರೊಕ್ಯುರೇಟರ್ ಮಾರ್ಸೆಲ್ ಡಿಸೋಜ ಉಪಸ್ಥಿತರಿದ್ದರು.ಫಾ.ಫ್ರಾನ್ಸಿಸ್ ಝೇವಿಯರ್ ಲೂವಿಸ್ ಶಿರ್ವ ಸಮೀಪದ ಪೆರ್ನಾಲ್ ಚರ್ಚಿನವರಾಗಿದ್ದು ದಿ.ಜಾನ್ ಲೂವಿಸ್ ಮತ್ತು ತೆರೆಸಾ ಲೂವಿಸ್ ದಂಪತಿಯ ಪುತ್ರರಾಗಿದ್ದಾರೆ. ಇವರಿಗೆ ಇಬ್ಬರು ಹಿರಿಯ ಸಹೋದರರು ಹಾಗೂ ಒಬ್ಬ ಕಿರಿಯ ಸಹೋದರಿ ಇದ್ದಾರೆ. ಯಾಜಕ ವೃತ್ತಿಯ ಕರೆಯನ್ನು ಸ್ವೀಕರಿಸಿ, 1976ರ ಜೂ.30ರಂದು ಮಂಗಳೂರು ಧರ್ಮಪ್ರಾಂತದ ಸೆಮಿನರಿಯಲ್ಲಿ ಸೇರಿ, 1987 ಎ.28ರಂದು ಯಾಜಕರಾಗಿ ಅಭಿಷೇಕಗೊಂಡರು.
ಕಳೆದ 39 ವರ್ಷಗಳ ಸಮರ್ಪಿತ ಯಾಜಕ ಸೇವೆಯಲ್ಲಿ, ಫ್ರಾನ್ಸಿಸ್ ಧರ್ಮಪ್ರಾಂತದ ವಿವಿಧ ಧಾರ್ಮಿಕ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ್ದಾರೆ. 1987ರಿಂದ 1997ರವರೆಗೆ ಬೀದರ್ ಮಿಷನ್ನಲ್ಲಿ ಮಿಷನರಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸಿ, ಬೀದರ, ಭಾಲ್ಕಿ, ಜಲಸಂಗಿ-ಹುಮ್ನಾಬಾದ್ ಹಾಗೂ ಬಸವ ಕಲ್ಯಾಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದರು. ನಂತರ 1997ರಿಂದ 2004ರವರೆಗೆ ಮಂಗಳೂರು ಬಜಾಲ್ನ ಹೋಲಿ ಸ್ಪಿರಿಟ್ ಚರ್ಚ್ನಲ್ಲಿ ಧರ್ಮಗುರುಗಳಾಗಿ ಕಾರ್ಯ ನಿರ್ವಹಿಸಿದ್ದರು.2004ರಿಂದ 2006ರವರೆಗೆ ಕೆನರಾ ಕಮ್ಯುನಿಕೇಶನ್ ಸೆಂಟರ್ ಹಾಗೂ ವೊಕೇಶನ್ ಸರ್ವಿಸ್ ಸೆಂಟರ್ ನಿರ್ದೇಶಕರಾಗಿ, 2006ರಿಂದ 2008ರ ವರೆಗೆ ಸಂಡೇಶ-ಕರ್ನಾಟಕ ಪ್ರಾದೇಶಿಕ ಸಂವಹನ ಕೇಂದ್ರದ ನಿರ್ದೇಶಕ ರಾಗಿ ಹಾಗೂ 2004ರಿಂದ 2008ರವರೆಗೆ ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಮಹತ್ವದ ಕೊಡುಗೆ ನೀಡಿದ್ದಾರೆ.
2008ರಿಂದ 2016ರವರೆಗೆ ಮಣಿಪಾಲದ ಕ್ರೈಸ್ಟ್ ಚರ್ಚಿನಲ್ಲಿ, 2016ರಿಂದ 2022ರವರೆಗೆ ಮುದರಂಗಡಿ ಸೈಂಟ್ ಫ್ರಾನ್ಸಿಸ್ ಝೇವಿರ್ಯ ಚರ್ಚಿನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. 2022ರಿಂದ 2026ರವರೆಗೆ ಕಲತ್ತೂರು ಅರ್ವ ಲೇಡಿ ಆಫ್ ಪರ್ಪೆಚುವಲ್ ಸೆರ್ಕ್ಯೂ ಚರ್ಚಿನಲ್ಲಿ ಸೇವೆ ಸಲ್ಲಿಸಿದರು. ಇವರನ್ನು 2026ರ ಮೇ 18ರಿಂದ ಜಾರಿಗೆ ಬರುವಂತೆ ಕಲ್ಯಾಣಪುರದ ಮಿಲಾಗ್ರಿಸ್ ಪ್ರಧಾನಾಲಯದ ರೆಕ್ಟರ್ ಹಾಗೂ ಧರ್ಮ ಗುರುವಾಗಿ ಅದರೊಂದಿಗೆ ಕಲ್ಯಾಣಪುರ ವಲಯ ಪ್ರಧಾನ ಧರ್ಮ ಗುರುಗಳಾಗಿ ಕೂಡ ನೇಮಕ ಮಾಡಲಾಗಿದೆ.