ಸುಡು ಬಿಸಿಲಿಗೂ ಬತ್ತದ ಪಾಜಕದ ತೀರ್ಥಕೊಳ: ಪ್ರಕೃತಿಯ ಅದ್ಬುತ ಪವಾಡ
Tuesday, May 12, 2026
ಬೇಸಿಗೆಯ ಬಿಸಿಲು ಭೂಮಿಯನ್ನೇ ಸುಡುತ್ತಿದ್ದು ನೀರಿನ ಮೂಲಗಳು ಬತ್ತುತ್ತಿವೆ. ಆದರೆ ಉಡುಪಿ ಜಿಲ್ಲೆಯ ಪವಿತ್ರ ಪಾಜಕ ಕ್ಷೇತ್ರದಲ್ಲಿರುವ ನಾಲ್ಕು ಕೊಳಗಳಲ್ಲಿ ಮಾತ್ರ ಪ್ರಕೃತಿಯೇ ಒಂದು ಅದ್ಭುತ ರಹಸ್ಯವನ್ನು ಕಾಪಾಡಿಕೊಂಡಿದೆ.
ಶ್ರೀ ಮಧ್ವಾಚಾರ್ಯರ ಜನ್ಮಸ್ಥಳವೆಂದು ಪ್ರಸಿದ್ಧಿಯಾಗಿರುವ ಪಾಜಕದಲ್ಲಿರುವ ಪುರಾಣ ಪ್ರಸಿದ್ಧ ನಾಲ್ಕು ತೀರ್ಥಗಳಲ್ಲಿ ನೀರಿನ ಹರಿವು ಮಾತ್ರ ಎಂದಿನಂತೆಯೇ ಮುಂದುವರಿದಿದೆ.
ಪರಶುರಾಮನು ತನ್ನ ಆಯುಧಗಳಿಂದ ಸೃಷ್ಟಿಸಿದ ಕೊಳಗಳೆಂದು ನಂಬಲಾದ ಧನುಷ್ ತೀರ್ಥ, ಗದಾ ತೀರ್ಥ, ಬಾಣ ತೀರ್ಥ ಹಾಗೂ ಪರಶು ತೀರ್ಥವೆಂದು ಕರೆಯಲ್ಪಡುವ ಈ ನಾಲ್ಕು ಕೊಳಗಳ ಸುತ್ತಲಿನ ಬಂಡೆಗಳು ಬಿಸಿಲಿನ ತೀವ್ರತೆಯಿಂದ ಉರಿಯುತ್ತಿವೆ. ಮಧ್ಯಾಹ್ನದ ಹೊತ್ತಿಗೆ ಬಂಡೆಗಳ ಮೇಲೆ ಕೈ ಇಡುವುದಕ್ಕೂ ಆಗದಷ್ಟು ಉಷ್ಣತೆ ಕಾಣಿಸುತ್ತದೆ. ಆದರೆ ಅದೇ ಬಂಡೆಗಳ ಮಧ್ಯದಲ್ಲಿರುವ ತೀರ್ಥಗಳ ನೀರು ಮಾತ್ರ ಅಚ್ಚರಿಯ ರೀತಿಯಲ್ಲಿ ತಂಪಾಗಿಯೇ ಉಳಿದಿದೆ. ಅಲ್ಲದೇ ಸುಡು ಬಿಸಿಲ ದಾಹಕ್ಕೆ ಈ ಕೊಳದ ನೀರು ಆವಿಯಾಗದೇ ಉಳಿದಿರುವುದು ಅಚ್ಚರಿಯ ಸಂಗತಿ ಎನ್ನುತ್ತಾರೆ ಸ್ಥಳೀಯರು.
ಸುತ್ತಲಿನ ಬಂಡೆಗಳು ಉರಿಯುತ್ತಿರುವ ಅಗ್ನಿಯಂತೆ ಬಿಸಿಯಾಗಿದ್ದರೂ, ಆ ಕೊಳದ ನೀರು ಮಾತ್ರ ಹಿಮದಂತೆ ತಂಪಾಗಿರುತ್ತದೆ. ಪಾಜಕ ಪ್ರದೇಶದ ಬಂಡೆಗಳ ಒಳಭಾಗದಲ್ಲಿ ಸಹಜ ಜಲಮೂಲಗಳ ಸಂಪರ್ಕ ಇರಬಹುದೆಂಬ ಸಾಧ್ಯತೆ ಇದೆ. ಭೂಗರ್ಭದ ಜಲಸಂಚಯ ನಿರಂತರವಾಗಿರುವುದರಿಂದ ಈ ತೀರ್ಥಗಳಲ್ಲಿ ನೀರು ಉಳಿದಿರಬಹುದು ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇಲ್ಲಿ ನೀರು ಎಂದಿಗೂ ಬತ್ತದೇ ಇರುವುದಕ್ಕೆ ಪರಶುರಾಮನ ಆಶೀರ್ವಾದವೇ ಕಾರಣ ಎನ್ನುತ್ತಾರೆ ಭಕ್ತರು.
ಸಂಜೆಯ ಹೊತ್ತಿಗೆ ತೀರ್ಥಗಳ ಸುತ್ತಲೂ ಹರಡುವ ಶಾಂತ ವಾತಾವರಣ, ಬಂಡೆಗಳ ನಡುವೆ ಹರಿಯುವ ತಂಪಿನ ಗಾಳಿ ಮತ್ತು ಕೊಳದ ನಿರ್ಮಲ ನೀರು ಇವೆಲ್ಲವೂ ಪಾಜಕವನ್ನು ಬೇಸಿಗೆಯಲ್ಲೂ ವಿಶಿಷ್ಟ ಆಧ್ಯಾತ್ಮಿಕ ತಾಣವನ್ನಾಗಿ ರೂಪಿಸಿವೆ. ಪ್ರಕೃತಿ ಮತ್ತು ಭಕ್ತಿಯ ಅದ್ಭುತ ಸಂಗಮವಾಗಿ ಜನರನ್ನು ಆಕರ್ಷಿಸುತ್ತಿದೆ.

