-->
ಜೂ.21 ನೀಟ್ ಮರು ಪರೀಕ್ಷೆ:ಲೋಪವಿಲ್ಲದೆ ಪಾರದರ್ಶಕವಾಗಿ ನಡೆಸಿ– ಡಿಸಿ ಸ್ವರೂಪ ಟಿ.ಕೆ

ಜೂ.21 ನೀಟ್ ಮರು ಪರೀಕ್ಷೆ:ಲೋಪವಿಲ್ಲದೆ ಪಾರದರ್ಶಕವಾಗಿ ನಡೆಸಿ– ಡಿಸಿ ಸ್ವರೂಪ ಟಿ.ಕೆ


ಉಡುಪಿ ಜಿಲ್ಲೆಯ ಆರು ಪರೀಕ್ಷಾ ಕೇಂದ್ರಗಳಲ್ಲಿ ಜೂನ್ 21ರಂದು ನಡೆಯಲಿರುವ ನೀಟ್ (ಯುಜಿ) ಮರು ಪರೀಕ್ಷೆಯನ್ನು ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದೆ, ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅಧಿಕಾರಿಗಳಿಗೆ ಸೂಚನೆ ನೀಡಿದರು. 


ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲ ಉಂಟಾಗದಂತೆ ಸುಗಮ ವಾತಾವರಣ ಕಲ್ಪಿಸಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 2,970 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದು, ಇದರಲ್ಲಿ 938 ಬಾಲಕರು, 2,032 ಬಾಲಕಿಯರು, 7 ವಿಶೇಷಚೇತನ ಅಭ್ಯರ್ಥಿಗಳು ಹಾಗೂ ಒಬ್ಬ ಸ್ಕ್ರೈಬ್ ಸೌಲಭ್ಯ ಪಡೆದ ಅಭ್ಯರ್ಥಿ ಸೇರಿದ್ದಾರೆ. ಮಧ್ಯಾಹ್ನ 2ರಿಂದ ಸಂಜೆ 5.15ರವರೆಗೆ ಪರೀಕ್ಷೆ ನಡೆಯಲಿದ್ದು, ಈ ಬಾರಿ ಹೆಚ್ಚುವರಿಯಾಗಿ 15 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ವಿಶೇಷಚೇತನ ಅಭ್ಯರ್ಥಿಗಳಿಗೆ ನಿಯಮಾನುಸಾರ ಒಂದು ಗಂಟೆ ಹೆಚ್ಚುವರಿ ಸಮಯಾವಕಾಶ ಕಲ್ಪಿಸಲಾಗುವುದು.

ವಿದ್ಯಾರ್ಥಿಗಳ ಪರಿಶೀಲನೆ ಕಾರ್ಯ ಬೆಳಿಗ್ಗೆ 11ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ನಂತರ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್, ಬ್ಲೂಟೂತ್ ಸಾಧನ, ಇಯರ್‌ಫೋನ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ತರಲು ಅವಕಾಶವಿಲ್ಲ. ಅಭ್ಯರ್ಥಿಗಳು ಪ್ರವೇಶ ಪತ್ರ, ಮೂಲ ಗುರುತಿನ ಚೀಟಿ ಹಾಗೂ ಸೂಚನೆಯಂತೆ ಭಾವಚಿತ್ರಗಳೊಂದಿಗೆ ಹಾಜರಾಗಬೇಕು ಎಂದು ಸೂಚಿಸಿದರು.

ನೀಟ್ ಜಿಲ್ಲಾ ನೋಡಲ್ ಅಧಿಕಾರಿ ಎನ್. ಕರೀಂ ಖಾನ್ ಮಾತನಾಡಿ, ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಕೋಟದ ವಿವೇಕ ಪಿಯು ಕಾಲೇಜು, ಉಡುಪಿಯ ಎಂಜಿಎಂ ಪಿಯು ಕಾಲೇಜು, ಸರ್ಕಾರಿ ಪಿಯು ಬೋರ್ಡ್, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಹಾಗೂ ಬ್ರಹ್ಮಾವರ ಸರ್ಕಾರಿ ಪದವಿ ಪೂರ್ವ ಕಾಲೇಜು ಸೇರಿದಂತೆ ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ, ಬಯೋಮೆಟ್ರಿಕ್ ದೃಢೀಕರಣ ಹಾಗೂ ಪ್ರತ್ಯೇಕ ಪ್ರಿಸ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಪರೀಕ್ಷಾ ಪ್ರಕ್ರಿಯೆಯನ್ನು ಮಾರ್ಗಸೂಚಿಯಂತೆ ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದರು.

Ads on article

Advertise in articles 1

advertising articles 2

Advertise under the article