-->
ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಮನೆ ಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ

ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಮನೆ ಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ


ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜೂನ್ 23ರಿಂದ ಮನೆಮನೆಗೆ ಭೇಟಿ ನೀಡಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ . ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.


ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಜೂನ್ 30ರಿಂದ ಜುಲೈ 29ರವರೆಗೆ ನಡೆಯಲಿದ್ದು, ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಕಾಂಗ್ರೆಸ್ ಪಕ್ಷದ ಮುಖಂಡರು, ಬಿಎಲ್‌ಎ-1, ಬಿಎಲ್‌ಎ-2 ಹಾಗೂ ಕಾರ್ಯಕರ್ತರು ಸಂಪೂರ್ಣ ಸಜ್ಜಾಗಿದ್ದಾರೆ ಎಂದು ಹೇಳಿದರು. ರಾಜ್ಯಾದ್ಯಂತ ಎಸ್‌ಐಆರ್ ಕುರಿತು ಮನೆಮನೆಗೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಕೆಲಸವೂ ನಡೆಯಲಿದೆ ಎಂದರು.

ರಾಜ್ಯ ಸರ್ಕಾರ ಐದು ಗ್ಯಾರಂಟಿಗಳ ಜೊತೆಗೆ ಮತ್ತಷ್ಟು ಜನಪರ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಹೊಸ ಯೋಜನೆಗಳನ್ನೂ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದ ಅವರು, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಭರವಸೆಗಳು ಈಡೇರಿಲ್ಲ ಎಂದು ಆರೋಪಿಸಿದರು. ಪಕ್ಷಾಂತರಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ , ದೇಶದ ಹಲವು ರಾಜ್ಯಗಳಲ್ಲಿ ಎಸ್‌ಐಆರ್ ಜಾರಿಯಾಗಿದ್ದು, ಲಕ್ಷಾಂತರ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಅಲ್ಪಸಂಖ್ಯಾತರು, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯಗಳನ್ನು ಗುರಿಯಾಗಿಸಿ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ ಎಂದು ಅವರು ಹೇಳಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರ್ ಮಾತನಾಡಿ, ಎಸ್‌ಐಆರ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಉಡುಪಿ ಜಿಲ್ಲೆಯ 1111 ಮತಗಟ್ಟೆಗಳಲ್ಲೂ ಈ ಕುರಿತು ವ್ಯಾಪಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಮುನಿಯಾಲು ಉದಯ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಕಿಶನ್ ಹೆಗ್ಡೆ ಕೊಳ್ಕಬೈಲ್, ಹರಿಪ್ರಸಾದ್ ರೈ, ಅಲೆವೂರು ಹರೀಶ್ ಕಿಣಿ, ರಾಜು ಪೂಜಾರಿ, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ಸುಭೋದ್ ರಾವ್, ಸಂತೋಷ್ ಕುಲಾಲ್, ವೈ. ಸುಕುಮಾರ್, ಗೋಪಿನಾಥ್ ಭಟ್, ಪ್ರಶಾಂತ್ ಜತ್ತನ್ನ ಹಾಗೂ ಕಿಶೋರ್ ಎರ್ಮಾಳು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article