‘ಮಿಸ್ಟರ್, ಮಿಸ್, ಟೀನ್ ಹಾಗೂ ಮಿಸೆಸ್ ಮಣಿಪಾಲ್ ಎಡಿಷನ್–3’ ಪ್ರತಿಭಾ ಸ್ಪರ್ಧೆ ಗ್ರ್ಯಾಂಡ್ ಫಿನಾಲೆ
ಕರಾವಳಿಯ ಪ್ರತಿಭಾವಂತರಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ಅವಕಾಶ ಕಲ್ಪಿಸಿದ ‘ಮಿಸ್ಟರ್, ಮಿಸ್, ಟೀನ್ ಹಾಗೂ ಮಿಸೆಸ್ ಮಣಿಪಾಲ್ ಎಡಿಷನ್–3’ ಮತ್ತು ‘ಲಿಲ್ ಪ್ರಿನ್ಸ್ ಹಾಗೂ ಲಿಲ್ ಪ್ರಿನ್ಸೆಸ್ ಕರ್ನಾಟಕ – ಉಡುಪಿ–ಮಂಗಳೂರು ಆವೃತ್ತಿ’ ಸ್ಪರ್ಧೆಗಳ ಗ್ರ್ಯಾಂಡ್ ಫಿನಾಲೆ ಅದ್ದೂರಿಯಾಗಿ ನೆರವೇರಿತು.
ಲೂಪ್ ಈವೆಂಟ್ಸ್ ಮತ್ತು ಒಎಸ್‌ಸಿ ಈವೆಂಟ್ಸ್ ಮಣಿಪಾಲ್ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವು ಮಣಿಪಾಲದ ವೆಸ್ಟಿಂಡ್ ಕಂಟ್ರಿ ಕ್ಲಬ್ ಹಾಗೂ ಬ್ರಹ್ಮಾವರದ ಚೇತನಾ ಹೈಸ್ಕೂಲ್ ಸಭಾಂಗಣದಲ್ಲಿ ನಡೆಯಿತು. ಉಡುಪಿ, ಮಂಗಳೂರು, ಕುಂದಾಪುರ ಸೇರಿದಂತೆ ಕರಾವಳಿಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಿಗಳು ತಮ್ಮ ವ್ಯಕ್ತಿತ್ವ, ಪ್ರತಿಭೆ, ಆತ್ಮವಿಶ್ವಾಸ ಮತ್ತು ವೇದಿಕೆ ನಿರ್ವಹಣಾ ಸಾಮರ್ಥ್ಯವನ್ನು ಅನಾವರಣಗೊಳಿಸಿದರು.
ಸ್ಪರ್ಧೆಯ ವಿವಿಧ ವಿಭಾಗಗಳಿಗೆ 500ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದ್ದವು. ಬಳಿಕ ಉಡುಪಿ, ಮಂಗಳೂರು ಮತ್ತು ಕುಂದಾಪುರದಲ್ಲಿ ನಡೆದ ಆಡಿಷನ್‌ಗಳ ಮೂಲಕ ಸುಮಾರು 170 ಸ್ಪರ್ಧಿಗಳನ್ನು ಗ್ರ್ಯಾಂಡ್ ಫಿನಾಲೆಗೆ ಆಯ್ಕೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ನಟಿಯರಾದ ಶುಭಾ ಪೂಂಜಾ, ಪ್ರಿಯಾ ಹೆಗ್ಡೆ ಹಾಗೂ ಪಲ್ಲವಿ ಗುರುಕಿರಣ್ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಿ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ತೀರ್ಪುಗಾರರು ಸ್ಪರ್ಧಿಗಳ ಸಂವಹನ ಕೌಶಲ್ಯ, ವ್ಯಕ್ತಿತ್ವ, ಪ್ರತಿಭೆ, ಆತ್ಮವಿಶ್ವಾಸ ಮತ್ತು ಒಟ್ಟಾರೆ ಪ್ರದರ್ಶನವನ್ನು ಆಧರಿಸಿ ಮೌಲ್ಯಮಾಪನ ನಡೆಸಿದರು.
ಸ್ಪರ್ಧೆಯಲ್ಲಿ ಮಿಸ್ಟರ್ ಮಣಿಪಾಲ್ ವಿಭಾಗದಲ್ಲಿ ಸಮರ್ಥ್ ರೈ ಪ್ರಶಸ್ತಿ ಗೆದ್ದರೆ, ಕರಣ್ ಸಾಲಿಯಾನ್ ಪ್ರಥಮ ರನ್ನರ್-ಅಪ್ ಹಾಗೂ ಅಬ್ದುಲ್ ಬಶಿತ್ ದ್ವಿತೀಯ ರನ್ನರ್-ಅಪ್ ಸ್ಥಾನ ಪಡೆದರು. ಮಿಸ್ ಮಣಿಪಾಲ್ ವಿಭಾಗದಲ್ಲಿ ರಕ್ಷಿತಾ ಶೆಟ್ಟಿ ಕಿರೀಟ ಮುಡಿಗೇರಿಸಿಕೊಂಡರು. ಅಲ್ವಿನಾ ಮೆನೆಜಸ್ ‘ಕ್ರೌನ್ ಆಫ್ ಇನ್ಸಿಗ್ನಿಯಾ’ ಗೌರವಕ್ಕೆ ಪಾತ್ರರಾದರೆ, ಕಾವ್ಯ ಸಾಲಿಯಾನ್ ಮತ್ತು ಸಂಜನಾ ಬೆಸ್ಕೂರ್ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ರನ್ನರ್-ಅಪ್ ಸ್ಥಾನಗಳನ್ನು ಪಡೆದರು.
ಟೀನ್ ಮಣಿಪಾಲ್ ವಿಭಾಗದಲ್ಲಿ ಚೈತಾಲಿ ಎಸ್. ವಿಜೇತರಾಗಿ ಹೊರಹೊಮ್ಮಿದರೆ, ದಿಯಾ ಗಡಿಯಾರ್ ಹಾಗೂ ಶಷ್ಟಿ ಕುಂದರ್ ರನ್ನರ್-ಅಪ್ ಸ್ಥಾನಗಳನ್ನು ಪಡೆದುಕೊಂಡರು. ಮಿಸೆಸ್ ಮಣಿಪಾಲ್ ವಿಭಾಗದಲ್ಲಿ ಡಾ. ಅನ್ಸಿ ಸಿ. ಡಿಸೋಜಾ ವಿಜೇತರಾಗಿ ಆಯ್ಕೆಯಾದರೆ, ಲೊರೈನ್ ನಜರೇತ್ ಮತ್ತು ಅನುಷಾ ಯು.ಬಿ. ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ರನ್ನರ್-ಅಪ್ ಆಗಿ ಗುರುತಿಸಿಕೊಂಡರು.
ಲೂಪ್ ಈವೆಂಟ್ಸ್‌ನ ಸುಶೀಲ್ ಹೆಗ್ಡೆ, ನಿತಿನ್ ಲೋಬೋ ಮತ್ತು ಪೂಜಾ ಸುಶೀಲ್ ಹೆಗ್ಡೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ಆಯೋಜಿಸಲಾಯಿತು. ಪ್ರತಿಭೆ ಅನಾವರಣದ ಜೊತೆಗೆ ಸಮಾಜಮುಖಿ ಉದ್ದೇಶವನ್ನೂ ಹೊಂದಿದ್ದ ಈ ಸ್ಪರ್ಧೆಯ ಮೂಲಕ ಶಿಕ್ಷಣ, ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ನೆರವು ನೀಡುವ ಸೇವಾ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.
.jpeg)

.jpeg)