-->
9 ತಿಂಗಳಿಂದ ನಾಪತ್ತೆಯಾಗಿದ್ದ ಯುವಕ ಕುಟುಂಬದ ಮಡಿಲಿಗೆ..!

9 ತಿಂಗಳಿಂದ ನಾಪತ್ತೆಯಾಗಿದ್ದ ಯುವಕ ಕುಟುಂಬದ ಮಡಿಲಿಗೆ..!



ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪರಿಚಿತ ಯುವಕನ ವಾರಸುದಾರರನ್ನು ಪತ್ತೆಹಚ್ಚಿ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಸಮಾಜಸೇವಕ ನಿತ್ಯಾನಂದ ಒಳಕಾಡು, ಜಿಲ್ಲಾಸ್ಪತ್ರೆಯ ಸಿಬ್ಬಂದಿ ಸುರೇಶ್ ನಾವೂರು ಹಾಗೂ ರೈಲ್ವೆ ಪೊಲೀಸರ ಸಹಕಾರದಿಂದ ಯುವಕ ಮರಳಿ ತನ್ನ ಕುಟುಂಬವನ್ನು ಸೇರುವಂತಾಗಿದೆ. 



 

ಆಂಧ್ರ ಪ್ರದೇಶ ಮೂಲದ ದಿಲೀಪ್ ಎಂಬ ಯುವಕ ಕಳೆದ ಒಂಬತ್ತು ತಿಂಗಳಿಂದ ನಾಪತ್ತೆಯಾಗಿದ್ದು, ಅವರ ಪೋಷಕರು ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಇದೀಗ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೇ ತಮ್ಮ ಮಗ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ತಾಯಿ ಹಾಗೂ ಸಹೋದರ ಉಡುಪಿಗೆ ಆಗಮಿಸಿ, ದಿಲೀಪ್ ಅವರನ್ನು ಸ್ವಗ್ರಾಮಕ್ಕೆ ಕರೆದೊಯ್ದಿದ್ದಾರೆ.

ಕೆಲವು ತಿಂಗಳ ಹಿಂದೆ ರೈಲ್ವೇ ರಕ್ಷಣಾ ಪಡೆಯ ಆರಕ್ಷಕ ವಿಶ್ರಾಮ್ ದೇಸಾಯಿ ಅವರು ಉಡುಪಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ಅಸಹಾಯಕ ಸ್ಥಿತಿಯಲ್ಲಿದ್ದ ಯುವಕನನ್ನು ಗಮನಿಸಿದ್ದರು. ಬಳಿಕ ರೈಲ್ವೆ ಪೊಲೀಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಯುವಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ವ್ಯವಸ್ಥೆ ಮಾಡಿದ್ದರು.

ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಾದ ಡಾ. ವಾಸುದೇವ್ ಅವರ ವಿಶೇಷ ಕಾಳಜಿ ಹಾಗೂ ಸಮರ್ಪಕ ಚಿಕಿತ್ಸೆಯಿಂದ ಯುವಕನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಇದೇ ವೇಳೆ ಯುವಕನ ಗುರುತು ಹಾಗೂ ಕುಟುಂಬದವರ ಪತ್ತೆಗೆ ಸಮಾಜಸೇವಕ ನಿತ್ಯಾನಂದ ಒಳಕಾಡು ಮತ್ತು ಆಸ್ಪತ್ರೆಯ ಸಿಬ್ಬಂದಿ ಸುರೇಶ್ ನಾವೂರು ನಿರಂತರ ಪ್ರಯತ್ನ ನಡೆಸಿದ್ದರು.

ಅವರ ಪ್ರಯತ್ನದ ಫಲವಾಗಿ ಯುವಕನ ಕುಟುಂಬದವರನ್ನು ಸಂಪರ್ಕಿಸಲು ಸಾಧ್ಯವಾಗಿದ್ದು, ಕೊನೆಗೂ ಒಂಬತ್ತು ತಿಂಗಳ ಬಳಿಕ ದಿಲೀಪ್ ತಮ್ಮ ಕುಟುಂಬದವರೊಂದಿಗೆ ಒಂದಾಗಿದ್ದಾರೆ. ಈ ಮಾನವೀಯ ಕಾರ್ಯದಲ್ಲಿ ಭಾಗಿಯಾದ ರೈಲ್ವೆ ರಕ್ಷಣಾ ಪಡೆ, ರೈಲ್ವೆ ಪೊಲೀಸರು, ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಮತ್ತು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ಸೇವೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.




Ads on article

Advertise in articles 1

advertising articles 2

Advertise under the article