ನೆಹರೂ ಹೆಸರು ಕ್ಷೀಣಗೊಳಿಸಲು ಸಹಕಾರಿ ಸಪ್ತಾಹದ ದಿನಾಂಕ ಬದಲಾವಣೆ: ಹರೀಶ್ ಕಿಣಿ ಖಂಡನೆ
ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನೂತನ ಸಹಕಾರಿ ಸಚಿವಾಲಯ ಆರಂಭಿಸಿ 5 ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ನವೆಂದರ್ 6ರ ಬದಲಿಗೆ ಜೂನ್ 26ರಿಂದ ಜುಲೈ 6ರವರೆಗೆ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ ಆಚರಿಸಲು ನಿರ್ಧರಿಸಿರುವುದನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ ಖಂಡಿಸಿದ್ದಾರೆ.
ಸ್ವತಂತ್ರ ಭಾರತದ ಅಭ್ಯುದಯದಲ್ಲಿ ಸಹಕಾರ ಕ್ಷೇತ್ರದ ಮಹತ್ವವನ್ನು ಮನಗಂಡ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಪ್ರಾಧಾನ್ಯತೆಯನ್ನು ನೀಡಿದರು.ಆ ಕಾರಣಕ್ಕಾಗಿ ಅವರ ಜನ್ಮ ದಿನಾಂಕ ನವೆಂಬರ್ 14 ರಿಂದ ಒಂದು ವಾರಗಳ ಕಾಲ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ 7 ದಶಕಗಳಿಂದ ಆಚರಿಸಲಾಗುತ್ತಿದೆ.
ಆದರೆ ಇದೀಗ ಬಿಜೆಪಿ ಸರಕಾರ ನೂತನ ಸಹಕಾರಿ ಸಚಿವಾಲಯ ಆರಂಭಿಸಿ 5 ವರ್ಷ ಕಳೆದಿರುವ ಕಾರಣ ಜೂನ್ 26 ರಿಂದ ಜುಲೈ 6 ರವರೆಗೆ ರಾಷ್ಟ್ರದಾದ್ಯಂತ ಸಹಕಾರ ಸಪ್ತಾಹ ಆಚರಿಸಲು ನಿರ್ಧರಿಸಿದೆ.
ಈ ದಿನಾಂಕ ಬದಲಾವಣೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ, ಸಹಕಾರಿ ಧುರೀಣ ಅಲೆವೂರು ಹರೀಶ್ ಕಿಣಿ ಅವರು, ಇದು ಬಿಜೆಪಿ ಸರಕಾರ ಮಾಡುವ ನೆಹರೂ ಅವರನ್ನು ಅವಮಾನಿಸುವ ಮುಂದುವರಿದ ಚಾಳಿ. ಅವರ ಕೊಡುಗೆಗಳನ್ನು ಕ್ಷೀಣಗೊಳಿಸಲು ನಡೆಸಿರುವ ಹುನ್ನಾರ. ಇದು ಈ ಹಿಂದೆ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಹೆಸರನ್ನು ಬದಲಾಯಿಸಿ VGRAMGI ಎಂದು ಬದಲಾಯಿಸಿ ಮಹಾತ್ಮಾ ಗಾಂಧೀಜಿ ಅವರ ಹೆಸರನ್ನು ಅಳಿಸಲು ನಡೆಸಿದ ಪ್ರಯತ್ನದ ಇನ್ನೊಂದು ಮಜಲು.
ಆದುದರಿಂದ ಸಹಕಾರ ಸಪ್ತಾಹದ ದಿನಾಂಕ ಬದಲಿಸದೇ ನವೆಂಬರ್ 14 ರಂದೇ ಆರಂಭಿಸ ಬೇಕು ಎಂದು ಮನವಿ ಮಾಡಿರು ಹರೀಶ್ ಕಿಣಿ ಈ ಕುರಿತು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಅವರಿಗೂ ಈ ಕುರಿತು ಕ್ರಮಕೈಗೊಳ್ಳುವಂತೆ ಆಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಇದರ ವ್ಯವಸ್ತಾಪಕ ನಿರ್ದೇಶಕರು ಹಾಗೂ ರಾಜ್ಯ ಸಹಕಾರ ಸಂಘಗಳ ನಿಬಂಧಕರು ರಾಜ್ಯದ ಎಲ್ಲಾ ಜಿಲ್ಲಾ ಸಹಕಾರಿ ಯೂನಿಯನ್ನುಗಳಿಗೆ ನೀಡಿರುವ ಆದೇಶವನ್ನು ಹಿಂಪಡೆಯುವ ಸೂಚನೆ ನೀಡಬೇಕೆಂದು ವಿನಂತಿಸಿದ್ದಾರೆ.