ಮಣಿಪಾಲ: ಶಾಲಾ ಬಸ್ ಅಪಘಾತ ತಪ್ಪಿಸಿದ ವಿದ್ಯಾರ್ಥಿ ಅಂಶುಲ್ ಗೆ ಸನ್ಮಾನ
Wednesday, June 17, 2026
ಚಲಿಸುತ್ತಿದ್ದ ಶಾಲಾ ಬಸ್ಸಿನಲ್ಲಿ ಚಾಲಕನಿಗೆ ಹೃದಯಾಘಾತವಾಗಿ ಬಸ್ ಅಪಘಾತಕ್ಕೀಡುವುದನ್ನು ತಪ್ಪಿಸಿದ್ದ ಮಣಿಪಾಲದ ಮಾಧವ ಕೃಪಾ ಶಾಲೆಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಂಶೆಲ್ ಶರುನ್ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಮಣಿಪಾಲದ ಮಾಧವ ಕೃಪಾ ಶಾಲೆಗೆ ಸೇರಿದ ಬಸ್ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಚಾಲಕನಿಗೆ ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥಗೊಂಡಿದ್ದಾರೆ. ಬಸ್ ನಿಯಂತ್ರಣ ತಪ್ಪಿದಾಗ ಪರಿಸ್ಥಿತಿಯನ್ನು ಅರಿತ ವಿದ್ಯಾರ್ಥಿ ಅಂಶುಲ್ ಶರುನ್ ತಕ್ಷಣ ಹ್ಯಾಂಡ್ ಬ್ರೇಕ್ ಹಾಕಿ ಭಾರೀ ಅವಘಡವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದರು. ಶಾಲಾ ಬಸ್ಸಿನಲ್ಲಿದ್ದ 40 ವಿದ್ಯಾರ್ಥಿಗಳನ್ನು ಅಪಾಯದಿಂದ ರಕ್ಷಿಸಿದ ವಿದ್ಯಾರ್ಥಿ ಅಂಶೆಲ್ ಶರುನ್ ಅವರ ಸಮಯೋಚಿತ ನಿರ್ಧಾರ ಮತ್ತು ಧೈರ್ಯವನ್ನು ಶಾಸಕ ಯಶ್ ಪಾಲ್ ಸುವರ್ಣ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜಾ, ನಗರ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶ್ರೀವತ್ಸ, ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಡೆನಿಸ್ ಮಸ್ಕರೇನ್ಹಸ್, ಯುವಮೋರ್ಚಾ ಪದಾಧಿಕಾರಿಗಳಾದ ನಿತಿನ್ ಪೈ, ಧನುಷ್ ಬಿ.ಕೆ., ಭೂಷಣ್ ಕುಮಾರ್ ಹಾಗೂ ಶಾಲೆಯ ವ್ಯವಸ್ಥಾಪಕ ರಮೇಶ್ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.