ಕೊಲ್ಲೂರಿಗೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ ಹಿನ್ನೆಲೆ: ದೇವಸ್ಥಾನದ ಸುತ್ತ ಬಿಗಿ ಭದ್ರತೆ
ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು (ಜೂನ್ 13) ಉಡುಪಿ ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆಯಲಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಟ್ಟೆಚ್ಚರದ ಭದ್ರತಾ ವ್ಯವಸ್ಥೆ ಕೈಗೊಂಡಿದೆ.
ಮುಖ್ಯಮಂತ್ರಿಗಳ ಭೇಟಿಯ ವೇಳೆ ಭಕ್ತಾದಿಗಳಿಗೆ ಅನಾನುಕೂಲವಾಗದಂತೆ ಹಾಗೂ ಭದ್ರತಾ ದೃಷ್ಟಿಯಿಂದ ಸಾರ್ವಜನಿಕರು ಪಾಲಿಸಬೇಕಾದ ಕೆಲವು ಪ್ರಮುಖ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ಪ್ರಕಟಿಸಿದೆ.
ಪೊಲೀಸ್ ಪ್ರಕಟಣೆಯ ಪ್ರಕಾರ, ಜೂನ್ 13ರ ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆಯುವುದನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಭಕ್ತರಿಗೆ ಮನವಿ ಮಾಡಲಾಗಿದೆ. ಈ ಅವಧಿಯಲ್ಲಿ ವಿವಿಐಪಿ ಭದ್ರತಾ ಕ್ರಮಗಳು ಜಾರಿಯಲ್ಲಿರುವುದರಿಂದ ದರ್ಶನಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ಆದಾಗ್ಯೂ, ದೇವಸ್ಥಾನ ಪ್ರವೇಶಕ್ಕೆ ಯಾವುದೇ ಸಂಪೂರ್ಣ ನಿರ್ಬಂಧ ವಿಧಿಸಲಾಗಿಲ್ಲ. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಬಹುದು. ಆದರೆ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ಹಾಗೂ ಸಂಚಾರ ನಿಯಂತ್ರಣ ಕ್ರಮಗಳಿಂದಾಗಿ ಸಾಮಾನ್ಯ ದರ್ಶನ ವ್ಯವಸ್ಥೆಯಲ್ಲಿ ವಿಳಂಬ ಉಂಟಾಗುವ ಸಾಧ್ಯತೆ ಇದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿಗಳ ವಾಹನ ಕಾನ್ವಾಯ್ ಸಂಚರಿಸುವ ಮಾರ್ಗ, ದೇವಸ್ಥಾನದ ಪ್ರಮುಖ ಪ್ರವೇಶ ದ್ವಾರಗಳು ಹಾಗೂ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರು ಅನಗತ್ಯವಾಗಿ ಗುಂಪುಗೂಡುವುದು, ಜನಸಂದಣಿ ಉಂಟುಮಾಡುವುದು ಹಾಗೂ ಭದ್ರತೆಗೆ ಅಡ್ಡಿಯಾಗುವ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಸಾರ್ವಜನಿಕರು ಹಾಗೂ ದೂರದೂರಿನಿಂದ ಆಗಮಿಸುವ ಭಕ್ತರು ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಮನವಿ ಮಾಡಿದ್ದು, ದರ್ಶನಕ್ಕಾಗಿ ಆಗಮಿಸುವವರು ತಮ್ಮ ಪ್ರಯಾಣ ಹಾಗೂ ದರ್ಶನದ ವೇಳೆಯನ್ನು ಮುಂಚಿತವಾಗಿ ಯೋಜಿಸಿಕೊಳ್ಳುವಂತೆ ಸಲಹೆ ನೀಡಿದೆ.
ಹೈ-ಪ್ರೊಫೈಲ್ ಭೇಟಿಯ ಹಿನ್ನೆಲೆಯಲ್ಲಿ ಕೊಲ್ಲೂರು ಪಟ್ಟಣ ಹಾಗೂ ದೇವಸ್ಥಾನದ ಸುತ್ತಮುತ್ತ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದೆ. ಭಕ್ತರು ಸಹಕಾರ ನೀಡುವ ಮೂಲಕ ಸುಗಮ ದರ್ಶನ ವ್ಯವಸ್ಥೆಗೆ ನೆರವಾಗಬೇಕು ಎಂದು ಪೊಲೀಸ್ ಇಲಾಖೆ ಕೋರಿದೆ.