ಪ್ರೀತಿಯ ನಾಟಕವಾಡಿ ಭಾವಿ ಪತಿಯ ಹತ್ಯೆ: ಪ್ರಿಯಕರನೊಂದಿಗೆ ಸೇರಿ ಪ್ರಪಾತಕ್ಕೆ ತಳ್ಳಿದ ವಧು
ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಭಾವಿ ಪತಿಯನ್ನು ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಿರುವ ಸಂಚಲನಕಾರಿ ಘಟನೆ ಮಹಾರಾಷ್ಟ್ರದ ಐತಿಹಾಸಿಕ ಲೋಹಗಢ ಕೋಟೆಯಲ್ಲಿ ಬೆಳಕಿಗೆ ಬಂದಿದೆ. ಆರಂಭದಲ್ಲಿ ಆಕಸ್ಮಿಕ ಸಾವು ಎಂದು ದಾಖಲಾಗಿದ್ದ ಪ್ರಕರಣವು ಇದೀಗ ಪೂರ್ವನಿಯೋಜಿತ ಕೊಲೆ ಎಂಬುದಾಗಿ ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ಜೈಪುರ ಮೂಲದ 25 ವರ್ಷದ ಕೇತನ್ ವಿಶಾಲ್ ಅಗರ್ವಾಲ್ ಜೂನ್ 19ರಂದು ಕೋಟೆಯ ಸಮೀಪದ 350 ಅಡಿ ಆಳದ ಪ್ರಪಾತಕ್ಕೆ ಬಿದ್ದು ಮೃತಪಟ್ಟಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು, ಕೇತನ್ ಅವರ ಭಾವಿ ಪತ್ನಿ ಸಿಯಾ ಗೋಯಲ್ (20) ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ (22) ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸರ ಪ್ರಕಾರ, ಕೇತನ್ ಹಾಗೂ ಸಿಯಾ ಅವರ ವಿವಾಹ ಜುಲೈ ತಿಂಗಳಲ್ಲಿ ನಡೆಯಬೇಕಾಗಿತ್ತು. ಮದುವೆಗಾಗಿ ಭರ್ಜರಿ ಸಿದ್ಧತೆಗಳು ಕೂಡ ನಡೆದಿದ್ದವು. ಆದರೆ ಸಿಯಾ, ಚೇತನ್ ಚೌಧರಿಯನ್ನು ಪ್ರೀತಿಸುತ್ತಿದ್ದು, ಕೇತನ್ ತಮ್ಮ ಪ್ರೇಮ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಹತ್ಯೆ ಮಾಡುವ ಸಂಚು ರೂಪಿಸಿದ್ದಳು ಎನ್ನಲಾಗಿದೆ.
ತನಿಖೆಯಲ್ಲಿ, ಮೇ 31ರಂದು ಲೋಹಗಢ ಕೋಟೆ ಚಾರಣದ ವೇಳೆ ಕೇತನ್ ಅವರನ್ನು ಪ್ರಪಾತಕ್ಕೆ ತಳ್ಳುವ ಮೊದಲ ಯತ್ನ ನಡೆದಿತ್ತು. ಬಳಿಕ ಜೂನ್ 14ರಂದು ಮತ್ತೊಮ್ಮೆ ಹತ್ಯೆಗೆ ಯತ್ನಿಸಿದ್ದರೂ ಅದು ಯಶಸ್ವಿಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 19ರಂದು ಸಿಯಾದ ಹುಟ್ಟುಹಬ್ಬದ ಸಂಭ್ರಮದ ನೆಪದಲ್ಲಿ ಕೇತನ್ ಅವರನ್ನು ಕೋಟೆಗೆ ಕರೆಸಲಾಗಿತ್ತು. ಪ್ರಪಾತದ ತುದಿಯಲ್ಲಿ ಫೋಟೋಶೂಟ್ ನಡೆಯುತ್ತಿದ್ದ ವೇಳೆ, ಸಿಯಾದ ಸೂಚನೆಯ ಮೇರೆಗೆ ಹಿಂದಿನಿಂದ ಬಂದ ಚೇತನ್, ಕೇತನ್ ಅವರನ್ನು ತಳ್ಳಿದ ಪರಿಣಾಮ ಅವರು ಆಳವಾದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮದುವೆಗೆ ಮುನ್ನ ಇಬ್ಬರೂ ಬಾಲಿಗೆ ಪ್ರವಾಸ ತೆರಳಲು ಯೋಜನೆ ರೂಪಿಸಿದ್ದರು. ಆದರೆ ಪ್ರಯಾಣದ ದಿನ ಸಿಯಾ ತನ್ನ ಪಾಸ್‌ಪೋರ್ಟ್ ಹರಿದು ಹಾಕಿ ಅದು ಕಳೆದುಹೋಗಿದೆ ಎಂದು ಹೇಳಿದ್ದರಿಂದ ಪ್ರವಾಸ ರದ್ದಾಗಿತ್ತು. ಈ ಘಟನೆಯನ್ನೂ ಪೊಲೀಸರು ತನಿಖೆಯ ಭಾಗವಾಗಿ ಪರಿಶೀಲಿಸಿದ್ದಾರೆ.
ಆರಂಭದಲ್ಲಿ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗಿತ್ತು. ಆದರೆ ಸಿಯಾ ನೀಡುತ್ತಿದ್ದ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಮೊಬೈಲ್ ಕರೆ ವಿವರಗಳು, ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳು ಹಾಗೂ ಇತರೆ ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲಿಸಿದರು. ಈ ವೇಳೆ ಸಿಯಾ ಮತ್ತು ಚೇತನ್ ಸೇರಿ ಕೊಲೆ ಸಂಚು ರೂಪಿಸಿ ಕೃತ್ಯ ಎಸಗಿರುವುದು ಬಹಿರಂಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.
