ನಶಾ ಮುಕ್ತ ಭಾರತ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ: ಡಾ. ಚಂದ್ರಶೇಖರ್
ಮಾದಕ ವ್ಯಸನಗಳಾದ ಮದ್ಯಪಾನ, ತಂಬಾಕು ಸೇವನೆ ಹಾಗೂ ಡ್ರಗ್ಸ್ ಬಳಕೆ ಇಂದು ಸಮಾಜವನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದ್ದು, ವಿಶೇಷವಾಗಿ ಯುವ ಸಮುದಾಯದ ಭವಿಷ್ಯವನ್ನು ಹಾಳು ಮಾಡುತ್ತಿದೆ ಎಂದು ಉಡುಪಿ ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಚಂದ್ರಶೇಖರ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ಉಡುಪಿ ಉಪವಿಭಾಗದ ವತಿಯಿಂದ ಮಂಗಳವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾದ ನಶಾ ಮುಕ್ತ ಭಾರತ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾದಕ ದ್ರವ್ಯಗಳ ವ್ಯಸನಕ್ಕೆ ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಚ್ಚು ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳೂ ಸಹ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದು, ಇದರಿಂದ ತಮ್ಮ ಜೀವನ ಹಾಗೂ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮಾದಕ ದ್ರವ್ಯ ಎಂಬುದು ಕೇವಲ ವೈಯಕ್ತಿಕ ಸಮಸ್ಯೆಯಲ್ಲ, ಅದು ಸಮಾಜದ ಅಭಿವೃದ್ಧಿಗೆ ಮಾರಕವಾಗಿರುವ ದೊಡ್ಡ ಸಾಮಾಜಿಕ ಪಿಡುಗಾಗಿದೆ. ದೇಶದ ಪ್ರಗತಿಗೆ ಯುವಜನತೆ ಪ್ರಮುಖ ಶಕ್ತಿಯಾಗಿರುವುದರಿಂದ ಅವರು ಯಾವುದೇ ರೀತಿಯ ವ್ಯಸನಗಳ ದಾಸರಾಗದಂತೆ ತಡೆಯುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಯುವಜನರಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾದಕ ವ್ಯಸನ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು. ಕುಟುಂಬ, ಶಿಕ್ಷಣ ಸಂಸ್ಥೆಗಳು ಹಾಗೂ ಸಮಾಜ ಒಟ್ಟಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನಶಾ ಮುಕ್ತ ಭಾರತ ನಿರ್ಮಾಣ ಸಾಧ್ಯ ಎಂದು ಅವರು ಕರೆ ನೀಡಿದರು.
ಮನೋ ವೈದ್ಯ ಡಾ. ಪಿವಿ ಭಂಡಾರಿ ಮಾತನಾಡಿ, ಭಾರತದಲ್ಲಿ ಮಕ್ಕಳು ಸುಮಾರು 13ನೇ ವಯಸ್ಸಿನಲ್ಲಿಯೇ ವಿವಿಧ ಕೆಟ್ಟ ಚಟಗಳಿಗೆ ಬಲಿಯಾಗಲು ಆರಂಭಿಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿಂದೆ ದೇಶವನ್ನು ರಾಜರು (ಕಿಂಗ್ಸ್) ಆಳುತ್ತಿದ್ದರೆ, ಇಂದು ಪಾನ್‌ಕಿಂಗ್, ಸ್ಮೋಕಿಂಗ್ ಹಾಗೂ ಡ್ರಿಂಕಿಂಗ್‌ಗಳು ಸಮಾಜವನ್ನು ಆಳುತ್ತಿರುವಂತಾಗಿದೆ ಎಂದು ವಿಷಾದಿಸಿದರು. ತಪ್ಪು ಕಲ್ಪನೆಗಳು ಮತ್ತು ಸ್ನೇಹಿತರ ಪ್ರಭಾವದಿಂದ ಹದಿಹರೆಯದ ಯುವಜನತೆ ಈ ದುಶ್ಚಟಗಳ ಜಾಲದಲ್ಲಿ ಸಿಲುಕಿ, ಬಳಿಕ ಅದರಿಂದ ಹೊರಬರಲು ಸಾಧ್ಯವಾಗದ ಸ್ಥಿತಿಗೆ ತಲುಪುತ್ತಿದ್ದಾರೆ. ಆದ್ದರಿಂದ ಪೋಷಕರು, ಶಿಕ್ಷಕರು ಹಾಗೂ ಸಮಾಜದ ಎಲ್ಲರೂ ಈ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿ ರಾಮ್ ಶಂಕರ್, ಕ್ಯೂಆರ್ ಕೋಡ್ ಮೂಲಕ ಸಾರ್ವಜನಿಕರಿಂದ ಬಂದ ಮಾಹಿತಿಯ ಆಧಾರದ ಮೇಲೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ, ವ್ಯಸನಕ್ಕೆ ಒಳಗಾದ ಕೆಲವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲಾಗಿದ್ದು, ಅನೇಕ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ ಎಂದರು.
ಪೊಲೀಸ್ ಇಲಾಖೆಯ ನಿರಂತರ ಕಾರ್ಯಾಚರಣೆ ಹಾಗೂ ಸಾರ್ವಜನಿಕರ ಸಹಕಾರದಿಂದ ಉಡುಪಿಯಲ್ಲಿ ಬಹಿರಂಗವಾಗಿ ಮಾದಕ ವಸ್ತುಗಳ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ವೇದಿಕೆಯಲ್ಲಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು, ಉಡುಪಿ ಡಿವೈಎಸ್ಪಿ ಬೆಳ್ಳಿಯಪ್ಪ ಉಪಸ್ಥಿತರಿದ್ದರು. ಉಡುಪಿ ನಗರ ಠಾಣೆಯ ಪ್ರಭಾರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಸ್ವಾಗತಿಸಿದರು. ಮಲ್ಪೆ ಪೊಲೀಸ್ ವೃತ್ತ ನಿರೀಕ್ಷರಕ ರಾಮಚಂದ್ರ ನಾಯ್ಕ್ ವಂದಿಸಿದರು. ನಗರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಸುರೇಂದ್ರ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮುನ್ನ ನಗರದ ಬೋರ್ಡ್ ಹೈಸ್ಕೂಲ್ ನಿಂದ ಅಮ್ಮಣ್ಣಿ ರಾಮಣ್ಣ ಸಭಾಂಗಣದವರೆಗೆ ಜಾಥಾ ನಡೆಯಿತು.








