ತೆಂಗಿನ ಕಾಯಿ ಬಿದ್ದು ಮೃತಪಟ್ಟ ದಕ್ಷ್ ಮನೆಗೆ ಶಾಸಕ ಯಶ್‌ಪಾಲ್ ಸುವರ್ಣ ಭೇಟಿ
ಉಡುಪಿ ಜಿಲ್ಲೆಯ ಚಾಂತಾರು ಗ್ರಾಮದ ಹೆರಂಜೆಯಲ್ಲಿ ತೆಂಗಿನ ಕಾಯಿ ಬಿದ್ದು ಒಂದೂವರೆ ವರ್ಷದ ಮಗು ದಕ್ಷ್ ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ಅವರು ಇಂದು ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಮೃತ ಬಾಲಕನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಶಾಸಕರು, ಪ್ರಕರಣದ ಕುರಿತು ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೆ, ಸರ್ಕಾರದ ವತಿಯಿಂದ ಗರಿಷ್ಠ ಪರಿಹಾರ ದೊರಕಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಸ್ಥಳೀಯರು ಘಟನೆ ನಡೆದ ಪ್ರದೇಶಕ್ಕೆ ಸೂಕ್ತ ರಸ್ತೆ ಸಂಪರ್ಕ ಕಲ್ಪಿಸುವಂತೆ ಮನವಿ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕ ಯಶ್‌ಪಾಲ್ ಸುವರ್ಣ, ರಸ್ತೆ ಸಂಪರ್ಕಕ್ಕೆ ಅಗತ್ಯವಿರುವ ಜಾಗದ ಮಾಲೀಕರು ಸಹಕರಿಸಿದಲ್ಲಿ ರಸ್ತೆ ಕಾಮಗಾರಿಗೆ ಆದ್ಯತೆಯ ಮೇರೆಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ನಂತರ ಮೃತ ಮಗುವಿನ ತಂದೆ ಪ್ರಶಾಂತ್ ಪೂಜಾರಿ, ತಾಯಿ ಸುಚಿತ್ರ ಹಾಗೂ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ ಶಾಸಕರು, ವೈಯಕ್ತಿಕ ನೆಲೆಯಲ್ಲಿ ಪರಿಹಾರ ಧನವನ್ನು ನೀಡಿದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಬಿ.ಎನ್. ಶಂಕರ್ ಪೂಜಾರಿ, ಕಂದಾಯ ಇಲಾಖೆಯ ಅಧಿಕಾರಿ ರಾಜು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೀರಾ, ಗ್ರಾಮ ಆಡಳಿತ ಅಧಿಕಾರಿ ಹಾಗೂ ಇತರರು ಉಪಸ್ಥಿತರಿದ್ದರು.