ಉಡುಪಿ ತ್ರಿವೇಣಿ ಸರ್ಕಲ್ ಬಳಿ ರಸ್ತೆಯಲ್ಲಿ ಎಣ್ಣೆ ಸೋರಿಕೆ, ಸಂಚಾರ ಅಸ್ತವ್ಯಸ್ತ
Monday, June 15, 2026
ಉಡುಪಿಯ ತ್ರಿವೇಣಿ ಸರ್ಕಲ್ ಸಮೀಪ ಎಣ್ಣೆಯ ಕ್ಯಾನೊಂದು ರಸ್ತೆಯಲ್ಲಿ ಬಿದ್ದು, ಎಣ್ಣೆ ರಸ್ತೆಯುದ್ದಕ್ಕೂ ಹರಡಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ಉಂಟಾಗಿತ್ತು.
ಬೈಕ್‌ನಲ್ಲಿ ಎಣ್ಣೆಯ ಕ್ಯಾನ್ ಸಾಗಿಸುತ್ತಿದ್ದ ವೇಳೆ ಅದು ಆಕಸ್ಮಿಕವಾಗಿ ರಸ್ತೆಗೆ ಬಿದ್ದ ಪರಿಣಾಮ ಎಣ್ಣೆ ರಸ್ತೆಯಲ್ಲಿ ಹರಡಿಕೊಂಡಿದೆ. ಇದರಿಂದ ರಸ್ತೆ ಜಾರುವಂತಾಗಿ, ಹಲವು ಬೈಕ್ ಸವಾರರು ನಿಯಂತ್ರಣ ತಪ್ಪಿ ಎಡವಿ ಬೀಳುವ ಪರಿಸ್ಥಿತಿ ಎದುರಾಗಿತ್ತು. ಈ ಬಗ್ಗೆ ಸ್ಥಳೀಯ ನಿವಾಸಿ ಪ್ರಸನ್ನ ಭಟ್ ಅವರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ನಿತ್ಯಾನಂದ ಒಳಕಾಡು ಅವರು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರು.
ಮಾಹಿತಿ ಪಡೆದ ನಗರಸಭೆಯ ಆರೋಗ್ಯ ನಿರೀಕ್ಷಕ ಸತೀಶ್ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಧಾವಿಸಿ, ನೀರಿನ ಟ್ಯಾಂಕರ್ ಮೂಲಕ ರಸ್ತೆ ಸ್ವಚ್ಛತಾ ಕಾರ್ಯಾಚರಣೆ ನಡೆಸಿದರು. ತೈಲವನ್ನು ಸಂಪೂರ್ಣವಾಗಿ ತೆರವುಗೊಳಿಸಿದ ಬಳಿಕ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.