ಉತ್ತರ ಕನ್ನಡದಲ್ಲಿ ಧಾರಾಕಾರ ಮಳೆ ಅಬ್ಬರ: ಜನಜೀವನ ಅಸ್ತವ್ಯಸ್ತ
ಕಳೆದ 36 ಗಂಟೆಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಜನಜೀವನವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ಜಿಲ್ಲೆಯ ಕರಾವಳಿ ಭಾಗದ ನಾಲ್ಕೂ ತಾಲೂಕುಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಯ ಪರಿಣಾಮ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ.
ಭಾರಿ ಮಳೆಯ ಪರಿಣಾಮ ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಗರ್ಭಗುಡಿಗೆ ಮಳೆನೀರು ನುಗ್ಗಿ, ಪವಿತ್ರ ಆತ್ಮಲಿಂಗ ಜಲಾವೃತಗೊಂಡಿದೆ. ಇದರಿಂದ ಭಕ್ತರಿಗೆ ಮಧ್ಯಾಹ್ನ 12 ಗಂಟೆಯ ನಂತರ ನೀಡಲಾಗುತ್ತಿದ್ದ ಆತ್ಮಲಿಂಗದ ಸ್ಪರ್ಶ ದರ್ಶನವನ್ನು ಭಾನುವಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ದೇವಾಲಯದ ಒಳಭಾಗಕ್ಕೆ ನೀರು ನುಗ್ಗಿದ್ದರಿಂದ ಪ್ರತಿದಿನ ಮಧ್ಯಾಹ್ನ 12:30ಕ್ಕೆ ನಡೆಯುವ ಮಹಾಪೂಜೆಯನ್ನೂ ನೆರವೇರಿಸಲು ಅರ್ಚಕರು ತೀವ್ರ ತೊಂದರೆ ಅನುಭವಿಸಿದರು. ಬಳಿಕ ದೇವಸ್ಥಾನದ ಸಿಬ್ಬಂದಿ ತುರ್ತು ಕ್ರಮ ಕೈಗೊಂಡು, ಗರ್ಭಗುಡಿಯ ಹೊರಭಾಗದಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ, ಪಂಪ್‌ಸೆಟ್ ಮೂಲಕ ಗರ್ಭಗುಡಿಯಲ್ಲಿದ್ದ ನೀರನ್ನು ಹೊರಹಾಕುವ ಕಾರ್ಯದಲ್ಲಿ ನಿರತರಾದರು.
ಇದೇ ವೇಳೆ ಗೋಕರ್ಣ ಪಟ್ಟಣದ ಪ್ರಮುಖ ರಸ್ತೆಗಳು ಮತ್ತು ಬೀದಿಗಳು ಸಂಪೂರ್ಣ ಜಲಾವೃತಗೊಂಡು ಕೆರೆಯಂತಾಗಿದ್ದವು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು, ಪ್ರವಾಸಿಗರು ಹಾಗೂ ವಾಹನ ಸವಾರರು ಸಂಚಾರಕ್ಕೆ ತೀವ್ರ ತೊಂದರೆ ಅನುಭವಿಸಿದರು.
ಭಾರಿ ಮಳೆಯ ಪರಿಣಾಮ ಕುಮಟಾ–ಸಿದ್ದಾಪುರ ರಾಜ್ಯ ಹೆದ್ದಾರಿಯೂ ಜಲಾವೃತಗೊಂಡಿದೆ. ಕುಮಟಾ ತಾಲೂಕಿನ ವಾಲಗಳಿ ಸಮೀಪ ರಸ್ತೆಯ ಮೇಲೆಯೇ ಹಳ್ಳದಂತೆ ನೀರು ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಬೇಕಾದ ಪರಿಸ್ಥಿತಿ ಎದುರಾಯಿತು. ಭಾರೀ ವಾಹನಗಳು ಅಪಾಯವನ್ನು ಲೆಕ್ಕಿಸದೇ ನೀರಿನಲ್ಲೇ ನಿಧಾನವಾಗಿ ಸಂಚರಿಸಿದವು.
ಹೆದ್ದಾರಿ ಬದಿಯ ತಗ್ಗು ಪ್ರದೇಶದಲ್ಲಿರುವ ಮನೆಗಳು ಹಾಗೂ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗುವ ಆತಂಕ ಎದುರಾದರೂ, ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾದ ಹಿನ್ನೆಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಜಿಲ್ಲೆಯಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅನಗತ್ಯ ಸಂಚಾರವನ್ನು ತಪ್ಪಿಸಿ, ಎಚ್ಚರಿಕೆಯಿಂದ ಇರಬೇಕೆಂದು ಸಂಬಂಧಿತ ಅಧಿಕಾರಿಗಳು ಮನವಿ ಮಾಡಿದ್ದಾರೆ.