ಗೋಹತ್ಯೆ, ಗೋಮಾಂಸ ರಫ್ತು ನಿಷೇಧಕ್ಕೆ ಕಾನೂನು ಜಾರಿಗೊಳಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ
ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ, ದೇಶಾದ್ಯಂತ ಗೋಹತ್ಯೆ ಹಾಗೂ ಗೋಮಾಂಸ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸುವ ಕಾನೂನು ಜಾರಿಗೊಳಿಸಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಇದರ ವಕ್ತಾರ ಮುಷ್ತಾಕ್ ಹೆನ್ನಾಬೈಲು ಒತ್ತಾಯಿಸಿದರು.
ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಕಸಾಯಿಖಾನೆಗಳನ್ನು ಮುಚ್ಚಿ, ಗೋಶಾಲೆಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಗೋಹತ್ಯೆ ವಿಚಾರದಲ್ಲಿ ದೊಡ್ಡ ಜಾಗತಿಕ ಸಮುದಾಯಗಳನ್ನು ಕೇಂದ್ರ ಸರ್ಕಾರವು ಯಾಮಾರಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಕಾರಾತ್ಮಕ ವಿಚಾರಗಳನ್ನೇ ಹಬ್ಬಿಸಲಾಗುತ್ತಿದೆ. ಈ ವಿಷಯದಲ್ಲಿ ಕೇವಲ ಪ್ರಚಾರ ನಡೆಯುತ್ತಿದ್ದು, ಗೋಹತ್ಯೆ ನಿಷೇಧಿಸುವ ಕುರಿತು ಸರ್ಕಾರ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಟೀಕಿಸಿದರು.
ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಿಂದಲೇ ಗೋಮಾಂಸ ರಫ್ತು ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಗೋಹತ್ಯೆ ಹಾಗೂ ಗೋಮಾಂಸ ರಫ್ತು ತಡೆಯುವ ನಿಟ್ಟಿನಲ್ಲಿ ಸಮರ್ಪಕ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು.ದೇಶದಲ್ಲಿ ಗೋಹತ್ಯೆ ನಿಷೇಧಿಸುವ ಕಾನೂನು ರೂಪಿಸಿ, ಗೋ ಸಂರಕ್ಷಣೆಗೆ ಆದ್ಯತೆ ನೀಡಬೇಕು. ಈ ಕುರಿತು ಕೇಂದ್ರ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಸಂವಿಧಾನಾತ್ಮಕ ಹಕ್ಕುಗಳ ಅಡಿಯಲ್ಲಿ ಶಾಂತಿಯುತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಸ್ಲಿಂ ಬಾಂಧವ್ಯ ವೇದಿಕೆಯ ಪ್ರಮುಖರಾದ ಅಬ್ದುಲ್ ಹಫೀಝ್ ಖಾಸಿಮಿ, ಝಾಕೀರ್ ಹುಸೈನ್ ಉಚ್ಚಿಲ, ಇಬ್ರಾಹಿಂ ನಡುಪದವು ಹಾಗೂ ಕೋಟ ಇಬ್ರಾಹಿಂ ಸಾಹೇಬ್ ಉಪಸ್ಥಿತರಿದ್ದರು.