ಜೂ.13: ಕೆರೆಕಟ್ಟೆ ಸಂತ ಅಂತೋನಿ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಉತ್ಸವ; ನಿರ್ಗತಿಕರ ಆಶ್ರಮ ಉದ್ಘಾಟನೆ
ಕುಂದಾಪುರದ ಸಿದ್ದಾಪುರ ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರದಲ್ಲಿ ವಾರ್ಷಿಕ ಮಹೋತ್ಸವ ಹಾಗೂ ನಿರ್ಗತಿಕರಿಗಾಗಿ ನಿರ್ಮಿಸಲಾದ ನೂತನ ಆಶ್ರಮದ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯಕ್ರಮವು ಜೂನ್ 13ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.
‘ಬಡವರ ಸೇವೆ ಕ್ರಿಸ್ತರ ಸೇವೆ’ ಎಂಬ ಹಬ್ಬದ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜಾ ಅವರು ನೂತನ ಆಶ್ರಮವನ್ನು ಉದ್ಘಾಟಿಸಿ ಆಶೀರ್ವದಿಸಲಿದ್ದಾರೆ. ಬಳಿಕ ವಾರ್ಷಿಕ ಮಹೋತ್ಸವದ ವಿಶೇಷ ಬಲಿಪೂಜೆಯ ನೇತೃತ್ವ ವಹಿಸಲಿದ್ದಾರೆ.
ಸಂಜೆ 4 ಗಂಟೆಗೆ ಕನ್ನಡ ಭಾಷೆಯಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ಪವಿತ್ರ ಬಲಿಪೂಜೆಯನ್ನು ಶಿವಮೊಗ್ಗ ಧರ್ಮಕ್ಷೇತ್ರದ ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್‌ನ ರೋಮನ್ ಪಿಂಟೊ ನೆರವೇರಿಸಲಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಕೆರೆಕಟ್ಟೆ ಸಂತ ಅಂತೋನಿಯವರ ಪುಣ್ಯಕ್ಷೇತ್ರವು ಕ್ರೈಸ್ತರ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಸುಮಾರು 400 ವರ್ಷಗಳ ಹಿಂದೆ ಒಬ್ಬ ಹಿಂದೂ ರೈತ ತನ್ನ ಜಮೀನಿನಲ್ಲಿ ಉಳುಮೆ ಮಾಡುವ ವೇಳೆ ಸಂತ ಅಂತೋನಿಯವರ ಮರದ ಪ್ರತಿಮೆಯನ್ನು ಪತ್ತೆಹಚ್ಚಿದ ಘಟನೆ ಈ ಕ್ಷೇತ್ರದ ಇತಿಹಾಸಕ್ಕೆ ವಿಶೇಷ ಮಹತ್ವ ತಂದಿದೆ. 2013ರ ಜೂನ್ 13ರಂದು ಈ ಕ್ಷೇತ್ರವನ್ನು ಅಧಿಕೃತವಾಗಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವಾಗಿ ಘೋಷಿಸಲಾಗಿತ್ತು.
ಪ್ರತಿ ಮಂಗಳವಾರ ಇಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಪವಿತ್ರ ಬಲಿಪೂಜೆ ನಡೆಯುತ್ತಿದ್ದು, ದೂರದ ಊರುಗಳಿಂದ ಆಗಮಿಸುವ ಭಕ್ತರಿಗೆ ಉಚಿತ ಮಧ್ಯಾಹ್ನದ ಊಟದ ವ್ಯವಸ್ಥೆಯೂ ಕಲ್ಪಿಸಲಾಗಿದೆ. ಪ್ರತಿವರ್ಷ ಫೆಬ್ರವರಿ ಮತ್ತು ಜೂನ್ ತಿಂಗಳಲ್ಲಿ ಸಂತ ಅಂತೋನಿಯವರ ವಾರ್ಷಿಕ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ನಿರ್ಗತಿಕರಿಗಾಗಿ ಆಶ್ರಮ:
ಉಡುಪಿ ಧರ್ಮಪ್ರಾಂತ್ಯದ ಪ್ರಥಮ ಧರ್ಮಾಧ್ಯಕ್ಷರಾಗಿದ್ದ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರ ಕನಸಿನ ಯೋಜನೆಯಾಗಿ ಈ ನಿರ್ಗತಿಕರ ಆಶ್ರಮ ನಿರ್ಮಾಣಗೊಂಡಿದೆ. ಸಮಾಜದ ಆಶ್ರಯವಿಲ್ಲದ ಮತ್ತು ನಿರ್ಗತಿಕ ವ್ಯಕ್ತಿಗಳಿಗೆ ಸುರಕ್ಷಿತ ನೆಲೆ ಒದಗಿಸುವ ಉದ್ದೇಶದಿಂದ ಕೆರೆಕಟ್ಟೆ ಪುಣ್ಯಕ್ಷೇತ್ರದಲ್ಲಿ ಆಶ್ರಮ ನಿರ್ಮಿಸಲು ನಿರ್ಧರಿಸಲಾಗಿತ್ತು. ಪುಣ್ಯಕ್ಷೇತ್ರದ ರೆಕ್ಟರ್ ಸುನೀಲ್ ವೇಗಸ್ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದೊಂದಿಗೆ 2023ರ ಜೂನ್ 13ರಂದು ಆಶ್ರಮದ ಶಿಲಾನ್ಯಾಸ ನಡೆದಿದ್ದು, ಇದೀಗ ಕಟ್ಟಡ ಸಂಪೂರ್ಣವಾಗಿ ಸಿದ್ಧಗೊಂಡಿದೆ.
ಆಶ್ರಮದಲ್ಲಿ 60 ಮಂದಿ ನಿರ್ಗತಿಕರಿಗೆ ಉಚಿತವಾಗಿ ವಾಸ, ಊಟ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ಬಳಿಕ ಅವರಿಗೆ ಆಶ್ರಯ ಕಲ್ಪಿಸಲಾಗುವುದು. ಆಶ್ರಮದ ನಿರ್ವಹಣೆ ಮತ್ತು ವಾಸಿಗಳ ಮೇಲ್ವಿಚಾರಣೆಯನ್ನು ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಇಮ್ಯಾಕುಲೆಟ್ ಸಂಸ್ಥೆಯ ಧರ್ಮಭಗಿನಿಯರು ವಹಿಸಲಿದ್ದಾರೆ.
ಆಶ್ರಮದ ಎಲ್ಲಾ ವೆಚ್ಚಗಳು ದಾನಿಗಳು ಹಾಗೂ ಹಿತೈಷಿಗಳ ನೆರವಿನಿಂದ ನಿರ್ವಹಿಸಲ್ಪಡಲಿದ್ದು, ಸಹೃದಯ ದಾನಿಗಳಿಗೆ ಆಶ್ರಮದ ಅಭಿವೃದ್ಧಿಗೆ ಸಹಕರಿಸುವ ಅವಕಾಶವೂ ಇದೆ.
ಪುಣ್ಯಕ್ಷೇತ್ರದ ರೆಕ್ಟರ್ ವಂ. ಸುನೀಲ್ ವೇಗಸ್ ಮಾತನಾಡಿ, “ನಿರ್ಗತಿಕರಿಗೆ ಸುರಕ್ಷಿತ ನೆಲೆ ಮತ್ತು ಗೌರವಯುತ ಜೀವನ ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ದಾನಿಗಳ ಬೆಂಬಲದಿಂದ ನಿರ್ಮಾಣಗೊಂಡಿರುವ ಈ ಆಶ್ರಮ ಮುಂದಿನ ದಿನಗಳಲ್ಲಿ ಅನೇಕರ ಬದುಕಿಗೆ ಆಶಾಕಿರಣವಾಗಲಿದೆ” ಎಂದು ತಿಳಿಸಿದ್ದಾರೆ.
ಆಶ್ರಮದ ಪ್ರಮುಖ ದಾನಿಗಳಲ್ಲಿ ಒಬ್ಬರಾದ ಫಿಲಿಪ್ ಡಿಕೋಸ್ತಾ ಬಸ್ರೂರು ಅವರು, “ಸಮಾಜದ ನಿರ್ಗತಿಕರ ದುಸ್ಥಿತಿಯನ್ನು ಕಂಡು ಅವರಿಗೆ ನೆರವಾಗಬೇಕೆಂಬ ಮನೋಭಾವದಿಂದ ಈ ಯೋಜನೆಗೆ ಕೈಜೋಡಿಸಿದ್ದೇನೆ. ಮುಂದೆಯೂ ನನ್ನ ಸಹಕಾರ ಮುಂದುವರಿಯಲಿದೆ” ಎಂದು ಹೇಳಿದ್ದಾರೆ.
ವಾರ್ಷಿಕ ಮಹೋತ್ಸವ ಹಾಗೂ ಆಶ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ.
