ಚೆನ್ನೈನಲ್ಲಿ ‘ಸಿಂಗಪ್ಪೆನ್’ ವಿಶೇಷ ಮಹಿಳಾ ಪೊಲೀಸ್ ಪಡೆ: ಮಹಿಳಾ, ಮಕ್ಕಳ ಸುರಕ್ಷತೆಗೆ ಡ್ರೋನ್ ಗಸ್ತು
ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ತಮಿಳುನಾಡು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಚೆನ್ನೈನಲ್ಲಿ ‘ಸಿಂಗಪ್ಪೆನ್’ ಎಂಬ ವಿಶೇಷ ಮಹಿಳಾ ಪೊಲೀಸ್ ಪಡೆಯನ್ನು ಉದ್ಘಾಟಿಸಿದ್ದಾರೆ.
ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ತಡೆಗಟ್ಟುವುದು, ತುರ್ತು ಸಂದರ್ಭಗಳಲ್ಲಿ ತ್ವರಿತ ಸ್ಪಂದನೆ ನೀಡುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸುವುದು ಈ ಪಡೆಯ ಪ್ರಮುಖ ಉದ್ದೇಶವಾಗಿದೆ. ‘ಸಿಂಗಪ್ಪೆನ್’ ತಮಿಳು ಭಾಷೆಯಲ್ಲಿ ‘ಸಿಂಹಿಣಿ’ ಎಂಬ ಅರ್ಥವನ್ನು ಹೊಂದಿದ್ದು, ಮಹಿಳೆಯರ ರಕ್ಷಣೆಗಾಗಿ ಸಮರ್ಪಿತವಾಗಿ ಕಾರ್ಯನಿರ್ವಹಿಸುವ ವಿಶೇಷ ಪಡೆಯಾಗಿ ರೂಪಿಸಲಾಗಿದೆ. ಈ ಪಡೆ ರಾಜ್ಯದಾದ್ಯಂತ ಅಪರಾಧಪ್ರವಣ ಪ್ರದೇಶಗಳು, ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಜನಸಂದಣಿ ಹೆಚ್ಚಿರುವ ಪ್ರದೇಶಗಳಲ್ಲಿ ಗಸ್ತು ನಡೆಸಲಿದೆ.
ಮಹಿಳಾ ಸುರಕ್ಷತೆಗಾಗಿ ದೇಶದಲ್ಲೇ ಮೊದಲ ಬಾರಿಗೆ ಡ್ರೋನ್ ಆಧಾರಿತ ಗಸ್ತು ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಘೋಷಿಸಿದರು. ಡ್ರೋನ್‌ಗಳ ಮೂಲಕ ಸಾರ್ವಜನಿಕ ಸ್ಥಳಗಳ ಮೇಲೆ ನಿರಂತರ ನಿಗಾ ವಹಿಸುವುದರಿಂದ ಅಪರಾಧಗಳನ್ನು ಮುಂಚಿತವಾಗಿ ತಡೆಗಟ್ಟಲು ಹಾಗೂ ತುರ್ತು ಪರಿಸ್ಥಿತಿಗಳಿಗೆ ವೇಗವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗಲಿದೆ ಎಂದು ಮುಖ್ಯಮಂತ್ರಿ ವಿಜಯ್ ಅವರು ಹೇಳಿದ್ದಾರೆ.
‘ಸಿಂಗಪ್ಪೆನ್’ ಪಡೆಯ ನೇತೃತ್ವವನ್ನು ಹಿರಿಯ ಐಪಿಎಸ್ ಅಧಿಕಾರಿ ಕೆ. ಭವಾನೀಶ್ವರಿ ವಹಿಸಿಕೊಂಡಿದ್ದು, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಪಡೆಗೆ ವಿಶೇಷ ಗಸ್ತು ವಾಹನಗಳನ್ನೂ ಒದಗಿಸಲಾಗಿದ್ದು, ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ವಿಜಯ್ ಸ್ವತಃ ವಾಹನಕ್ಕೆ ಚಾಲನೆ ನೀಡಿದರು.
ಮಹಿಳಾ ಸುರಕ್ಷತೆಯನ್ನು ಚುನಾವಣಾ ಭರವಸೆಯಾಗಿ ಮಾತ್ರವಲ್ಲ, ಸರ್ಕಾರದ ಪ್ರಮುಖ ಆದ್ಯತೆಯಾಗಿ ಪರಿಗಣಿಸಲಾಗಿದೆ ಎಂದು ಮುಖ್ಯಮಂತ್ರಿ ವಿಜಯ್ ಸ್ಪಷ್ಟಪಡಿಸಿದರು. ಈ ಹೊಸ ಯೋಜನೆಯಿಂದ ಮಹಿಳೆಯರಲ್ಲಿ ಭದ್ರತೆಯ ಭಾವನೆ ಹೆಚ್ಚುವುದರ ಜೊತೆಗೆ ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಸರ್ಕಾರ ವ್ಯಕ್ತಪಡಿಸಿದೆ.