-->
ಗ್ರಾಹಕ ಆಯೋಗದ ಆದೇಶ ಉಲ್ಲಂಘನೆ: ಅಮೃತ್ ಶೆಣೈಗೆ ನ್ಯಾಯಾಂಗ ಬಂಧನ

ಗ್ರಾಹಕ ಆಯೋಗದ ಆದೇಶ ಉಲ್ಲಂಘನೆ: ಅಮೃತ್ ಶೆಣೈಗೆ ನ್ಯಾಯಾಂಗ ಬಂಧನ



ಮನೆ ನೋಂದಣಿ ಮಾಡಿಕೊಡುವಂತೆ ನೀಡಿದ್ದ ಗ್ರಾಹಕ ಆಯೋಗದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದ ಹಿನ್ನೆಲೆಯಲ್ಲಿ ಉದ್ಯಮಿ, ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಗೆ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಿ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಮಹತ್ವದ ಆದೇಶ ಹೊರಡಿಸಿದೆ.

ಡಿಕ್ರಿ ಹೋಲ್ಡರ್ ಸಂತೋಷ್ ಪೈ ಅವರು ಅಮೃತ್ ಶೆಣೈ ವಿರುದ್ಧ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮುಂದೆ ದಾವೆ ಹೂಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು ವೈಗರ್ ಅಪಾರ್ಟ್‌ಮೆಂಟ್‌ನ ಮನೆ ಸಂಖ್ಯೆ 304ನ್ನು ಅರ್ಜಿದಾರರ ಹೆಸರಿಗೆ ನೋಂದಣಿ ಮಾಡಿಕೊಡಬೇಕು, ಇಲ್ಲದಿದ್ದಲ್ಲಿ 27,20,000 ಮೊತ್ತವನ್ನು ವಾರ್ಷಿಕ ಶೇ.9 ಬಡ್ಡಿದರದೊಂದಿಗೆ ಪಾವತಿಸಬೇಕು ಎಂದು ಆದೇಶಿಸಿತ್ತು.

ಆದರೆ, ಆಯೋಗದ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಸಂತೋಷ್ ಪೈ ಮತ್ತೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದಿರುವುದು  ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಪರಿಗಣಿಸಿತು.

ಈ ಹಿನ್ನೆಲೆಯಲ್ಲಿ 2026ರ ಜೂನ್ 24ರಂದು ಆದೇಶ ನೀಡಿದ ಆಯೋಗವು ಆರೋಪಿಯಾದ ಅಮೃತ್ ಶೆಣೈ ಅವರಿಗೆ 3 ವರ್ಷಗಳ ಸಾದಾ ಕಾರಾಗೃಹ ಶಿಕ್ಷೆ, ₹1,00,000 ದಂಡ ಹಾಗೂ ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿತು. ಜೊತೆಗೆ ಆರೋಪಿಯನ್ನು ಆಯೋಗದ ಮುಂದೆ ಹಾಜರುಪಡಿಸುವಂತೆ ಬಂಧನ ವಾರಂಟ್ ಜಾರಿಗೊಳಿಸಿತು.

ಅದರಂತೆ ಜೂನ್ 25ರಂದು ಆರೋಪಿಯನ್ನು ಬಂಧಿಸಿ ಉಡುಪಿ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಆಯೋಗವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಬಳಿಕ ಅವರನ್ನು ಹಿರಿಯಡ್ಕ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.

Ads on article

Advertise in articles 1

advertising articles 2

Advertise under the article