-->
 ಉಡುಪಿ: ಕುಡುಕರ ಹಾವಳಿ ನಿಯಂತ್ರಿಸಿ: ನಿರ್ಗತಿಕರಿಗೆ ಆಶ್ರಯ ಕಲ್ಪಿಸಲು ಮನವಿ

ಉಡುಪಿ: ಕುಡುಕರ ಹಾವಳಿ ನಿಯಂತ್ರಿಸಿ: ನಿರ್ಗತಿಕರಿಗೆ ಆಶ್ರಯ ಕಲ್ಪಿಸಲು ಮನವಿ


ಉಡುಪಿ ನಗರದ ಸಾರ್ವಜನಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕುಡುಕರ ಹಾವಳಿ ಮತ್ತು ನಿರ್ಗತಿಕರ ಸಮಸ್ಯೆಯನ್ನು ತಕ್ಷಣ ನಿಯಂತ್ರಿಸುವಂತೆ ಆಗ್ರಹಿಸಿ, ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಸುಜಯ್ ಪೂಜಾರಿ, ಉಡುಪಿ ನಗರವು ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಹಾಗೂ ಸಾರ್ವಜನಿಕರು ನಗರಕ್ಕೆ ಆಗಮಿಸುತ್ತಿದ್ದಾರೆ. ಆದರೆ ಸಾರ್ವಜನಿಕ ಸ್ಥಳಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಕೆಲವರು ಮದ್ಯಪಾನ ಮಾಡಿ ಗಲಾಟೆ ನಡೆಸುವುದು, ಅಲ್ಲಿಯೇ ಮಲಗುವುದು ಹಾಗೂ ಅಶಿಸ್ತು ವರ್ತನೆ ಪ್ರದರ್ಶಿಸುವುದರಿಂದ ಸಾರ್ವಜನಿಕರಿಗೆ, ಮಹಿಳೆಯರಿಗೆ ಮತ್ತು ಪ್ರವಾಸಿಗರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.

ಇದರ ಜೊತೆಗೆ, ಆಶ್ರಯವಿಲ್ಲದ ನಿರ್ಗತಿಕರು ಪರ್ಯಾಯ ವ್ಯವಸ್ಥೆಯ ಕೊರತೆಯಿಂದ ಸಾರ್ವಜನಿಕ ಸ್ಥಳಗಳನ್ನೇ ಆಶ್ರಯತಾಣವನ್ನಾಗಿ ಬಳಸುತ್ತಿದ್ದಾರೆ. ಆದ್ದರಿಂದ ಅವರಿಗೆ ಮಾನವೀಯ ದೃಷ್ಟಿಯಿಂದ ಸೂಕ್ತ ಪರ್ಯಾಯ ಆಶ್ರಯ ಕೇಂದ್ರಗಳನ್ನು ಕಲ್ಪಿಸುವಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು ದಂಡ ವಿಧಿಸಿ ತೆರವುಗೊಳಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಬಗ್ಗೆ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ, ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾ ಘಟಕವು ಕಾನೂನುಬದ್ಧ ರೀತಿಯಲ್ಲಿ ಜನಪರ ಹೋರಾಟವನ್ನು ಕೈಗೊಳ್ಳಲಿದೆ ಎಂದು ಸಂಘಟನೆಯು ಎಚ್ಚರಿಕೆ ನೀಡಿದೆ.

ಗೌರವಾಧ್ಯಕ್ಷ ಲಕ್ಷ್ಮೀಶ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಸಿದ್ದಣ್ಣ ಎಸ್. ಪೂಜಾರಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅನಿತಾ ಬಿ.ವಿ., ಜಿಲ್ಲಾ ಕಾರ್ಯದರ್ಶಿ ಸುಬ್ಬಣ್ಣ ಕಾಮತ್, ಜಿಲ್ಲಾ ಸದಸ್ಯರಾದ ಅಶೋಕ, ಸಂತೋಷ್ ಹನುಮಂತ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article