-->
ಉಡುಪಿಯ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಪಾರ್ಕಿಂಗ್: ದಿನನಿತ್ಯ ಟ್ರಾಫಿಕ್ ಜಾಮ್ ಕಿರಿಕಿರಿ

ಉಡುಪಿಯ ರಸ್ತೆಯುದ್ದಕ್ಕೂ ಅಡ್ಡಾದಿಡ್ಡಿ ಪಾರ್ಕಿಂಗ್: ದಿನನಿತ್ಯ ಟ್ರಾಫಿಕ್ ಜಾಮ್ ಕಿರಿಕಿರಿ


ಉಡುಪಿ ನಗರದಲ್ಲಿ ದಿನೇದಿನೇ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಹಾಗೂ ನಿಯಂತ್ರಣವಿಲ್ಲದ ಪಾರ್ಕಿಂಗ್ ವ್ಯವಸ್ಥೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. 


ನಗರದ ಪ್ರಮುಖ ರಸ್ತೆಗಳಿಂದ ಹಿಡಿದು ಮಾರುಕಟ್ಟೆ ಪ್ರದೇಶಗಳು, ಆಸ್ಪತ್ರೆಗಳ ಸುತ್ತಮುತ್ತಲಿನ ಭಾಗಗಳು ಹಾಗೂ ಶಿಕ್ಷಣ ಸಂಸ್ಥೆಗಳ ಬಳಿಯೂ ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಪಾದಚಾರಿಗಳು ಮತ್ತು ವಾಹನ ಸವಾರರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.

ಎಲ್ಲೆಂದರಲ್ಲಿ ಪಾರ್ಕಿಂಗ್ – ರಸ್ತೆಗೂ ಇಲ್ಲ ಜಾಗ, ಜನರಿಗೂ ಇಲ್ಲ ಸುರಕ್ಷತೆ

ಕೋರ್ಟ್ ರಸ್ತೆ, ಸಿಟಿ ಬಸ್ ನಿಲ್ದಾಣ ಪರಿಸರ, ಎಂಜಿಎಂ ಕಾಲೇಜು ರಸ್ತೆ ಹಾಗೂ ಮಲ್ಪೆ ರಸ್ತೆ ಸೇರಿದಂತೆ ನಗರದ ಪ್ರಮುಖ ಭಾಗಗಳಲ್ಲಿ ಸಾಲುಗಟ್ಟಿ ನಿಂತ ವಾಹನಗಳು ಸಂಚಾರವನ್ನು ಸಂಪೂರ್ಣ ಅಸ್ತವ್ಯಸ್ತಗೊಳಿಸುತ್ತಿವೆ. ನಿಗದಿತ ಪಾರ್ಕಿಂಗ್ ಸ್ಥಳಗಳ ಕೊರತೆ ಹಾಗೂ ಇರುವ ಸ್ಥಳಗಳ ಅಸಮರ್ಪಕ ನಿರ್ವಹಣೆಯಿಂದ ವಾಹನ ಸವಾರರು ರಸ್ತೆ ಬದಿಯನ್ನೇ ಪಾರ್ಕಿಂಗ್ ಸ್ಥಳವಾಗಿ ಬಳಸುತ್ತಿರುವುದು ಸಾಮಾನ್ಯವಾಗಿದೆ.


ನಗರದ ಜನಸಂಖ್ಯೆ ಮತ್ತು ವ್ಯಾಪಾರ ಚಟುವಟಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಏರಿಕೆಯಾಗಿದೆ. ಆದರೆ ಅದಕ್ಕೆ ತಕ್ಕಂತೆ ಪಾರ್ಕಿಂಗ್ ಮೂಲಸೌಕರ್ಯ ಅಭಿವೃದ್ಧಿಯಾಗದಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಬೆಳಿಗ್ಗೆ ಮತ್ತು ಸಂಜೆ ವೇಳೆ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿದ್ದು, ಕೆಲವೊಮ್ಮೆ ಆಂಬ್ಯುಲೆನ್ಸ್ ಸೇರಿದಂತೆ ತುರ್ತು ಸೇವಾ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಕೆಲವು ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಸಿಗ್ನಲ್ ವ್ಯವಸ್ಥೆ ಇದ್ದರೂ, ನಿಯಮ ಪಾಲನೆಯ ಕೊರತೆಯಿಂದ ವಾಹನ ದಟ್ಟಣೆ ಉಂಟಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಪಾದಚಾರಿಗಳ ಪರದಾಟ – “ನಡೆದಾಡುವುದೇ ಅಪಾಯ”

ನಗರದಲ್ಲಿ ಪಾದಚಾರಿಗಳಿಗೆ ಸೂಕ್ತ ಫುಟ್‌ಪಾತ್ ವ್ಯವಸ್ಥೆಯ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ. ಇರುವ ಕಡೆಗಳಲ್ಲೂ ವಾಹನ ಪಾರ್ಕಿಂಗ್ ಅಥವಾ ಅಂಗಡಿಗಳ ಆಕ್ರಮಣದಿಂದ ಜನರು ರಸ್ತೆಯಲ್ಲೇ ನಡೆಯಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದ ಅಪಘಾತಗಳ ಅಪಾಯ ಹೆಚ್ಚಾಗಿದ್ದು, ವೃದ್ಧರು, ಮಕ್ಕಳು ಮತ್ತು ಶಾಲಾ ವಿದ್ಯಾರ್ಥಿಗಳು ಹೆಚ್ಚು ಸಂಕಷ್ಟ ಅನುಭವಿಸುತ್ತಿದ್ದಾರೆ.


ಕಲ್ಸಂಕ ಜಂಕ್ಷನ್‌ನಲ್ಲಿ ಫ್ರೀ ಲೆಫ್ಟ್ ಭಾಗದಲ್ಲೇ ಅಕ್ರಮ ಪಾರ್ಕಿಂಗ್

ಕಲ್ಸಂಕ ಜಂಕ್ಷನ್‌ನಲ್ಲಿ ಟ್ರಾಫಿಕ್ ಸುಗಮಗೊಳಿಸಲು ರೂಪಿಸಲಾದ ಫ್ರೀ ಲೆಫ್ಟ್ ವ್ಯವಸ್ಥೆಯಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಇದರಿಂದ ಜಂಕ್ಷನ್ ಬಳಿ ನಿರಂತರ ವಾಹನ ದಟ್ಟಣೆ ಉಂಟಾಗುತ್ತಿದೆ.

 ಕಲ್ಸಂಕ ಫ್ರೀ ಲೆಫ್ಟ್ ಭಾಗವನ್ನು ಸಂಪೂರ್ಣ “ನೋ ಪಾರ್ಕಿಂಗ್ ಜೋನ್” ಎಂದು ಘೋಷಿಸಬೇಕು, ಅಕ್ರಮ ಪಾರ್ಕಿಂಗ್ ವಾಹನಗಳಿಗೆ ತಕ್ಷಣ ದಂಡ ವಿಧಿಸಿ ತೆರವುಗೊಳಿಸಬೇಕು ಹಾಗೂ ನಗರದಲ್ಲಿ ಶಿಸ್ತಿನ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

Ads on article

Advertise in articles 1

advertising articles 2

Advertise under the article