-->
ಕಾಂಗ್ರೆಸ್ ಪಕ್ಷ ಸೇರ್ಪಡೆ ವದಂತಿ ಸುಳ್ಳು: ಅಧಿಕಾರವಲ್ಲ, ಜನಸೇವೆಯೇ ನನ್ನ ಧ್ಯೇಯ– ಪ್ರಮೋದ್ ಮಧ್ವರಾಜ್

ಕಾಂಗ್ರೆಸ್ ಪಕ್ಷ ಸೇರ್ಪಡೆ ವದಂತಿ ಸುಳ್ಳು: ಅಧಿಕಾರವಲ್ಲ, ಜನಸೇವೆಯೇ ನನ್ನ ಧ್ಯೇಯ– ಪ್ರಮೋದ್ ಮಧ್ವರಾಜ್


ಸಾಮಾಜಿಕ ಜಾಲತಾಣಗಳಲ್ಲಿ ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಹಾಗೂ ಊಹಾಪೋಹಗಳು ಸಂಪೂರ್ಣ ಆಧಾರರಹಿತವಾಗಿದ್ದು, ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಜೆಪಿ ಮುಖಂಡ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾವು ಅಧಿಕಾರ ಅಥವಾ ಹುದ್ದೆಗಳಿಗಾಗಿ ರಾಜಕೀಯಕ್ಕೆ ಬಂದವರಲ್ಲ ಎಂದು ಹೇಳಿದ್ದಾರೆ. "ನಾನು ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕಾಗಿ ಸೇರಿಲ್ಲ. ಜನಸೇವೆಯ ಉದ್ದೇಶದಿಂದ ಪಕ್ಷಕ್ಕೆ ಸೇರಿದ್ದೇನೆ. ಅಧಿಕಾರ ಅಥವಾ ಹುದ್ದೆಗಳು ಬಂದರೆ ಅದು ಹೆಚ್ಚುವರಿ ಜವಾಬ್ದಾರಿಯಷ್ಟೇ. ನನ್ನ ರಾಜಕೀಯ ಜೀವನದ ಮೂಲ ಉದ್ದೇಶ ಜನರ ಸೇವೆ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಯಾಗಿದೆ" ಎಂದು ತಿಳಿಸಿದ್ದಾರೆ. 

ಅಧಿಕಾರ ಅಥವಾ ಹುದ್ದೆಗಾಗಿ ತಾವು ಪರಿತಪಿಸುತ್ತಿಲ್ಲ ಎಂದು ಹೇಳಿರುವ ಅವರು, "ಹುದ್ದೆಗಳು ವ್ಯಕ್ತಿಯನ್ನು ದೊಡ್ಡವನನ್ನಾಗಿಸುವುದಿಲ್ಲ. ಜನರ ವಿಶ್ವಾಸ ಮತ್ತು ಸೇವೆಯೇ ವ್ಯಕ್ತಿಯ ನಿಜವಾದ ಶಕ್ತಿಯಾಗಿದೆ. ನನಗೆ ಅಧಿಕಾರ ಸಿಕ್ಕರೆ ಅದು ಜನರ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಲು ಮಾತ್ರ. ಅಧಿಕಾರ ಎನ್ನುವುದು ಗೌರವ ಅಥವಾ ಸ್ಥಾನಮಾನವಲ್ಲ, ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಜವಾಬ್ದಾರಿಯಾಗಿದೆ" ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷವು ಯಾವುದೇ ಜವಾಬ್ದಾರಿ ನೀಡಿದರೆ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಾಗಿ ಹಾಗೂ ಜವಾಬ್ದಾರಿ ಸಿಗದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಜನರ ಮಧ್ಯೆ ಕೆಲಸ ಮಾಡುವುದನ್ನು ಮುಂದುವರಿಸುವುದಾಗಿ ಅವರು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಪಕ್ಷದ ನಾಯಕರು ತಮ್ಮ ಕಾರ್ಯ, ಪಕ್ಷದ ಮೇಲಿನ ನಿಷ್ಠೆ ಹಾಗೂ ಜನಸೇವೆಯ ಬದ್ಧತೆಯನ್ನು ಗುರುತಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ರಾಜಕೀಯ ಪಯಣದಲ್ಲಿ ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಜನತೆಗೆ ಕೃತಜ್ಞತೆ ಸಲ್ಲಿಸಿರುವ ಅವರು, ಅವರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದವೇ ತಮ್ಮ ಶಕ್ತಿ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಕಿವಿಗೊಡದೆ, ಅಧಿಕೃತ ಮಾಹಿತಿಯನ್ನಷ್ಟೇ ನಂಬುವಂತೆ ಎಲ್ಲರಿಗೂ ಮನವಿ ಮಾಡಿದ್ದಾರೆ. "ಅಧಿಕಾರ ನನ್ನ ಗುರಿಯಲ್ಲ, ಜನಸೇವೆಯೇ ನನ್ನ ಧ್ಯೇಯ. ಅಧಿಕಾರ ಸಿಕ್ಕರೆ ಜನರ ಸೇವೆಗೆ ಬಳಸುತ್ತೇನೆ, ಸಿಗದಿದ್ದರೂ ಜನಸೇವೆಯನ್ನು ನಿಲ್ಲಿಸುವುದಿಲ್ಲ" ಎಂದು ಪ್ರಮೋದ್ ಮಧ್ವರಾಜ್ ಪುನರುಚ್ಚರಿಸಿದ್ದಾರೆ.

Ads on article

Advertise in articles 1

advertising articles 2

Advertise under the article