-->
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ

ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ


ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ವಿಶ್ವ ರಕ್ತದಾನಿಗಳ ದಿನವನ್ನು ಮಣಿಪಾಲದ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ ಆಚರಿಸಲಾಯಿತು. ಸ್ವಯಂಪ್ರೇರಿತ ರಕ್ತದಾನಿಗಳು, ರಕ್ತದಾನ ಪ್ರೇರಕರು ಹಾಗೂ ರಕ್ತದಾನ ಶಿಬಿರಗಳ ಸಂಘಟಕರ ಅಮೂಲ್ಯ ಸೇವೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ವರ್ಷದ ಧ್ಯೇಯವಾಕ್ಯವಾದ “ಮಾನವೀಯತೆಯ ಒಂದು ಹನಿ. ರಕ್ತ ನೀಡಿ. ಜೀವಗಳನ್ನು ಉಳಿಸಿ.” ಎಂಬ ಸಂದೇಶದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಕಾರ್ಯಕ್ರಮವನ್ನು ಬಂಟಕಲ್‌ನ ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಧಾಕೃಷ್ಣ ಎಸ್. ಐತಾಳ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ವಯಂಪ್ರೇರಿತ ರಕ್ತದಾನಿಗಳು ಹಾಗೂ ಸಂಘಟಕರು ಸಮಾಜಕ್ಕೆ ನೀಡುತ್ತಿರುವ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು. ರಕ್ತದಾನವು ಅತ್ಯಂತ ಶ್ರೇಷ್ಠ ಸೇವಾ ಕಾರ್ಯಗಳಲ್ಲಿ ಒಂದಾಗಿದ್ದು, ಶಿಕ್ಷಣ ಸಂಸ್ಥೆಗಳು ಹಾಗೂ ಸಮುದಾಯಗಳು ಜಾಗೃತಿ ಮೂಡಿಸುವಲ್ಲಿ ಮತ್ತು ನಿಯಮಿತ ರಕ್ತದಾನವನ್ನು ಉತ್ತೇಜಿಸುವಲ್ಲಿ ಸಕ್ರಿಯ ಪಾತ್ರ ವಹಿಸಬೇಕು ಎಂದು ಹೇಳಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿಯ ಎಂಜಿಎಂ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಮಾತನಾಡಿ, ಯುವಜನರಲ್ಲಿ ರಕ್ತದಾನದ ಬಗ್ಗೆ ನಿರಂತರ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಹಾಗೂ ನಾಗರಿಕರು ರಕ್ತದಾನವನ್ನು ತಮ್ಮ ಸಾಮಾಜಿಕ ಜವಾಬ್ದಾರಿಯ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರಕ್ತದಾನವು ಜಾಗತಿಕ ಮಟ್ಟದಲ್ಲಿ ಹಂಚಿಕೆಯ ಜವಾಬ್ದಾರಿಯಾಗಿದ್ದು, ವಿಶೇಷವಾಗಿ ಏಷ್ಯಾ ಹಾಗೂ ಆಫ್ರಿಕಾ ರಾಷ್ಟ್ರಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದರು. ಯುವ ಪೀಳಿಗೆ ಸ್ವಯಂಪ್ರೇರಿತ ರಕ್ತದಾನವನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡರೆ ಆರೋಗ್ಯಕರ ಹಾಗೂ ಸಹಾನುಭೂತಿಯ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮಾಹೆ ಬೋಧನಾ ಆಸ್ಪತ್ರೆಗಳ ಸಿಒಒ ಡಾ. ಸುಧಾಕರ್ ಕಂಟಿಪುಡಿ, ರಕ್ತ ಕೇಂದ್ರ ಮತ್ತು ರಕ್ತಪೂರಣ ಔಷಧ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಮೋಹನ್ ಹಾಗೂ ಪ್ರಾಧ್ಯಾಪಕಿ ಡಾ. ಶಮೀ ಶಾಸ್ತ್ರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅತ್ಯಧಿಕ ಸಂಖ್ಯೆಯ ರಕ್ತದಾನ ಶಿಬಿರಗಳನ್ನು ಆಯೋಜಿಸಿದ ಸಂಘ-ಸಂಸ್ಥೆಗಳು, ರಕ್ತದಾನ ಪ್ರೇರಕರು ಹಾಗೂ ಸ್ವಯಂಪ್ರೇರಿತ ರಕ್ತದಾನಿಗಳು ಸೇರಿದಂತೆ 80ಕ್ಕೂ ಹೆಚ್ಚು ಮಂದಿಯನ್ನು ಅವರ ಅತ್ಯುತ್ತಮ ಸೇವೆಗಾಗಿ ಸನ್ಮಾನಿಸಲಾಯಿತು. ಇದೇ ವೇಳೆ ಕಸ್ತೂರ್ಬಾ ಆಸ್ಪತ್ರೆಯ ರಕ್ತ ಕೇಂದ್ರದ ಅತ್ಯುತ್ತಮ ತಾಂತ್ರಿಕ ಮತ್ತು ತಾಂತ್ರಿಕೇತರ ಸಿಬ್ಬಂದಿಗೆ ಡಾ. ಸತೀಶ್ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಪ್ರಶಸ್ತಿಯನ್ನು ನೀಡಲಾಯಿತು.

ವಿಶ್ವ ರಕ್ತದಾನಿಗಳ ದಿನಾಚರಣೆಯ ಅಂಗವಾಗಿ ರಕ್ತದಾನದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶೇಷ ಕ್ಯಾನ್ವಾಸ್ ಚಿತ್ರಕಲೆಯನ್ನು ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅನಾವರಣಗೊಳಿಸಲಾಯಿತು. ಸಮುದಾಯ ವೈದ್ಯಕೀಯ ವಿಭಾಗದ ಕಲಾವಿದ ಶ್ರೀನಾಥ್ ಮಣಿಪಾಲ್ ಅವರು ರಚಿಸಿದ ಈ ಕಲಾಕೃತಿ, ಸ್ವಯಂಪ್ರೇರಿತ ರಕ್ತದಾನದ ಮಹತ್ವ ಹಾಗೂ ಜೀವ ಉಳಿಸುವಲ್ಲಿ ಸಮುದಾಯದ ಪಾತ್ರವನ್ನು ಬಿಂಬಿಸುತ್ತದೆ.

ಕಾರ್ಯಕ್ರಮದಲ್ಲಿ ಡಾ. ಶಮೀ ಶಾಸ್ತ್ರಿ ಸ್ವಾಗತಿಸಿ ಕಾರ್ಯಕ್ರಮದ ಅವಲೋಕನ ನೀಡಿದರು. ಡಾ. ಗಣೇಶ್ ಮೋಹನ್ ವಂದಿಸಿದರು. ವಿಶ್ವೇಶ್ ಎನ್ ಕಾರ್ಯಕ್ರಮ ನಿರೂಪಿಸಿದರು. 

Ads on article

Advertise in articles 1

advertising articles 2

Advertise under the article