ಅಕ್ರಮ ಮರಳು ಕಳವು ಆರೋಪ: ಇಬ್ಬರ ವಿರುದ್ಧ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ
Friday, June 19, 2026
ಅಕ್ರಮವಾಗಿ ಮರಳು ತೆಗೆಯುವ ಹಾಗೂ ಕಳವು ಮಾಡಿದ ಆರೋಪದಡಿ ಇಬ್ಬರ ವಿರುದ್ಧ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೆರ್ಡೂರು ಗ್ರಾಮದ ಯಡ್ಮಡ್ಕ ಪ್ರದೇಶದಲ್ಲಿರುವ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಕುರ್ಪಾಡಿ ಹೊಳೆಯಿಂದ ಜೆಸಿಬಿ ಮತ್ತು ಇತರೆ ವಾಹನಗಳ ಸಹಾಯದಿಂದ ಮರಳು ತೆಗೆದು ಸಾಗಿಸಲಾಗಿದೆ ಎಂದು ಪೆರ್ಡೂರು ಗ್ರಾಮದ ವಿಜಯ ಕುಲಾಲ್ (48) ಅವರು ನೀಡಿದ ದೂರಿನ ಮೇರೆಗೆ ದಿಲೀಪ್ ಪೂಜಾರಿ ಹಾಗೂ ವಿವೇಕ್ ಆಚಾರ್ಯ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ.
ಆರೋಪಿಗಳು ವಿಜಯ ಕುಲಾಲ್ ಅವರ ಮಾವನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಸುಮಾರು 20 ಸಾವಿರ ಮೌಲ್ಯದ ಮರಳನ್ನು ಕಳವು ಮಾಡಿ ಸಾಗಿಸಿದ್ದಾರೆ ಎನ್ನಲಾಗಿದೆ. ಘಟನೆಯ ಬಗ್ಗೆ ಪ್ರಶ್ನಿಸಲು ತೆರಳಿದ ವೇಳೆ, ಆರೋಪಿಗಳು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.