-->
ಅನುಮತಿಯಿಲ್ಲದೆ ಖಾಸಗಿ ವಿಡಿಯೋ ಹಂಚಿದರೆ ಜೈಲು ಗ್ಯಾರಂಟಿ; ಡಿಜಿಪಿ ಖಡಕ್ ಎಚ್ಚರಿಕೆ

ಅನುಮತಿಯಿಲ್ಲದೆ ಖಾಸಗಿ ವಿಡಿಯೋ ಹಂಚಿದರೆ ಜೈಲು ಗ್ಯಾರಂಟಿ; ಡಿಜಿಪಿ ಖಡಕ್ ಎಚ್ಚರಿಕೆ


ಡಿಜಿಟಲ್ ಯುಗದಲ್ಲಿ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ದುರುಪಯೋಗಪಡಿಸಿಕೊಂಡು ಬ್ಲಾಕ್‌ಮೇಲ್, ಕಿರುಕುಳ ಮತ್ತು ಪ್ರತೀಕಾರದ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಯಾವುದೇ ವ್ಯಕ್ತಿಯ ಅನುಮತಿ ಇಲ್ಲದೆ ಅವರ ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಪ್ರಸಾರ ಮಾಡಿದರೆ ತಕ್ಷಣವೇ ಎಫ್‌ಐಆರ್ ದಾಖಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಎಂ.ಎ. ಸಲೀಂ ಅವರು ಎಲ್ಲಾ ಪೊಲೀಸ್ ಠಾಣೆಗಳಿಗೆ ಏಕರೂಪದ ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಖಾಸಗಿ ಕ್ಷಣಗಳ ಫೋಟೋ ಮತ್ತು ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ಲೀಕ್ ಮಾಡುವ ಪ್ರಕರಣಗಳಲ್ಲಿ ಸಂತ್ರಸ್ತರು ಪೊಲೀಸ್ ಠಾಣೆಗಳಿಗೆ ದೂರು ನೀಡಲು ಹೋದಾಗ, ಕೆಲವೆಡೆ ದೂರು ಸ್ವೀಕರಿಸಲು ನಿರಾಕರಿಸುವುದು ಅಥವಾ ವಿಳಂಬ ಮಾಡುವ ಬಗ್ಗೆ ದೂರುಗಳು ಬಂದಿದ್ದವು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಡಿಜಿಪಿ, ಇಂತಹ ಪ್ರಕರಣಗಳಲ್ಲಿ ಯಾವುದೇ ಕಾರಣಕ್ಕೂ ದೂರು ದಾಖಲಿಸಲು ನಿರಾಕರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ಡಿಜಿಪಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ, ಖಾಸಗಿ ಫೋಟೋ ಅಥವಾ ವಿಡಿಯೋ ಚಿತ್ರೀಕರಣಕ್ಕೆ ವ್ಯಕ್ತಿಯು ಒಪ್ಪಿಗೆ ನೀಡಿದ್ದರೂ, ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲು ಪ್ರತ್ಯೇಕ ಒಪ್ಪಿಗೆ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಚಿತ್ರೀಕರಣಕ್ಕೆ ನೀಡಿದ ಒಪ್ಪಿಗೆಯನ್ನು ಪ್ರಸಾರಕ್ಕೆ ನೀಡಿದ ಒಪ್ಪಿಗೆಯೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಇಂತಹ ಸೂಕ್ಷ್ಮ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಲು ನಿರಾಕರಿಸಿದರೆ ಅಥವಾ ಅನಗತ್ಯ ವಿಳಂಬ ಮಾಡಿದರೆ ಅದನ್ನು ಗಂಭೀರ ಕರ್ತವ್ಯ ಲೋಪವೆಂದು ಪರಿಗಣಿಸಿ ಸಂಬಂಧಿತ ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.

ಮಾರ್ಗಸೂಚಿಯ ಪ್ರಮುಖ ಅಂಶಗಳು

ಖಾಸಗಿ ಫೋಟೋ ಅಥವಾ ವಿಡಿಯೋವನ್ನು ಚಿತ್ರೀಕರಿಸಲು ಒಪ್ಪಿಗೆ ಇದ್ದರೂ, ಹಂಚಲು ಅನುಮತಿ ಇಲ್ಲದೆ ಪ್ರಸಾರ ಮಾಡಿದರೆ ಅದು ಅಪರಾಧ.

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66(ಇ), 67 ಹಾಗೂ 67(ಎ) ಲಿಂಗ ತಟಸ್ಥವಾಗಿದ್ದು, ಪುರುಷ ಮತ್ತು ಮಹಿಳೆ ಇಬ್ಬರಿಗೂ ಸಮಾನವಾಗಿ ಅನ್ವಯವಾಗುತ್ತವೆ.

ಮಹಿಳೆಯರ ಖಾಸಗಿ ಕ್ಷಣಗಳನ್ನು ಗುಟ್ಟಾಗಿ ಚಿತ್ರೀಕರಿಸುವುದು ಅಥವಾ ಪ್ರಸಾರ ಮಾಡುವುದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 77ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ.

ಯಾವುದೇ ವ್ಯಕ್ತಿಯ ಖಾಸಗಿ ಅಂಗಗಳ ಫೋಟೋ ಅಥವಾ ವಿಡಿಯೋವನ್ನು ಅನುಮತಿಯಿಲ್ಲದೆ ಸೆರೆಹಿಡಿಯುವುದು, ಪ್ರಕಟಿಸುವುದು ಅಥವಾ ಹಂಚುವುದು ಗೌಪ್ಯತೆ ಉಲ್ಲಂಘನೆಯಾಗಿ ಪರಿಗಣಿಸಲಾಗುತ್ತದೆ.

ಅಶ್ಲೀಲ ಅಥವಾ ಕಾಮಪ್ರಚೋದಕ ವಿಷಯಗಳನ್ನು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು ಐಟಿ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ.

ಸಂತ್ರಸ್ತರಿಗೆ ತ್ವರಿತ ನ್ಯಾಯದ ಭರವಸೆ

ರಾಜ್ಯ ಪೊಲೀಸ್ ಇಲಾಖೆಯ ಈ ಹೊಸ ಮಾರ್ಗಸೂಚಿಯು ಸೈಬರ್ ಬ್ಲಾಕ್‌ಮೇಲ್, ಖಾಸಗಿ ವಿಡಿಯೋ ಸೋರಿಕೆ (ರಿವೆಂಜ್ ಪೋರ್ನ್) ಹಾಗೂ ಡಿಜಿಟಲ್ ಕಿರುಕುಳ ಪ್ರಕರಣಗಳ ಸಂತ್ರಸ್ತರಿಗೆ ತ್ವರಿತ ನ್ಯಾಯ ದೊರಕಿಸಲು ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ, ಡಿಜಿಟಲ್ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡು ಇತರರ ಗೌಪ್ಯತೆಯನ್ನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಮತ್ತಷ್ಟು ಪರಿಣಾಮಕಾರಿಯಾಗುವ ಸಾಧ್ಯತೆ ಇದೆ.


Ads on article

Advertise in articles 1

advertising articles 2

Advertise under the article