ಬಡವರ ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷದ ಧ್ಯೇಯ: ಪ್ರಸಾದ್ ರಾಜ್ ಕಾಂಚನ್
ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದ್ದು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಡವರ ಉದ್ಧಾರಕ್ಕಾಗಿ ಕೈಗೊಂಡ ಯೋಜನೆಗಳ ಪರಿಣಾಮವಾಗಿ ಭಾರತ ಇಂದು ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆದಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ಯ ಕಾಂಚನ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿಯವರ ಜನ್ಮದಿನದ ಅಂಗವಾಗಿ ಉಡುಪಿಯ ಕಾಂಗ್ರೆಸ್ ಭವನದಲ್ಲಿ ನಡೆದ ವಿಶೇಷ ಚೇತನರಿಗೆ ಸಹಾಯಕ ಸಾಧನಗಳು ಹಾಗೂ ಪೌಷ್ಟಿಕ ಆಹಾರ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಕೇವಲ ಮೂರು ಶೇಕಡಾ ಜನರಿಗೆ ಮಾತ್ರ ಶಿಕ್ಷಣದ ಅವಕಾಶವಿದ್ದು, ಕೈಗಾರಿಕಾ ಕ್ಷೇತ್ರವೂ ಅಭಿವೃದ್ಧಿಯಾಗಿರಲಿಲ್ಲ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ದೂರದೃಷ್ಟಿಯಿಂದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಬಲಿಷ್ಠ ಅಡಿಪಾಯ ಹಾಕಿದ ಪರಿಣಾಮ ಭಾರತ ಇಂದು ಉನ್ನತ ಸ್ಥಾನಕ್ಕೆ ತಲುಪಿದೆ. ಅದೇ ಕುಟುಂಬದ ನಾಯಕ ರಾಹುಲ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಬಡ ಮತ್ತು ಹಿಂದುಳಿದ ವರ್ಗದ ಜನರ ನೆರವಿಗೆ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ವಿರೋಧ ಪಕ್ಷಗಳು ಬಡವರ ಉದ್ಧಾರ ಮಾಡುವ ಬದಲು ಶ್ರೀಮಂತರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಪಕ್ಷವೇ ಬಡವರ ಪರವಾಗಿ ಕೆಲಸ ಮಾಡುತ್ತಿರುವ ರಾಜಕೀಯ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಪಕ್ಷವನ್ನು ದೂರವಿಟ್ಟರೆ ಬಡವರು ಇನ್ನಷ್ಟು ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಬಡವರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಪ್ರಸಾದ್ ರಾಜ್ ಕಾಂಚನ್ ಕರೆ ನೀಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ನಿರಂತರ ಜನರ ನೋವಿಗೆ ಸ್ಪಂದಿಸುವ, ಸಾಮಾಜಿಕ ನ್ಯಾಯದ ಪರ ಹೋರಾಡುವ, ಮಾನವೀಯ ಹೃದಯದ ನಾಯಕ ರಾಹುಲ್ ಗಾಂಧಿಯವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸುಮಾರು 75 ಮಂದಿ ವಿಶೇಷ ಚೇತನರಿಗೆ ಸಹಾಯಕ ಸಾಧನಗಳಾದ ಶ್ರವಣ ಸಾಧನ, ಕಂಬೋಡ್ ವೀಲ್ ಚೇರ್, ವಾಟರ್ ಬೆಡ್, ವಾಕರ್, ವಾಕಿಂಗ್ ಸ್ಟಿಕ್, ಕ್ರಚ್ಸ್ ಹಾಗೂ ಪೌಷ್ಟಿಕ ಆಹಾರ ಕಿಟ್ ಗಳನ್ನು ವಿತರಿಸಲಾಯಿತು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್, ಕಾಂಗ್ರೆಸ್ ಪ್ರಮುಖರಾದ ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹರಿಪ್ರಸಾದ್ ರೈ,ಕಾನೂನು ಸೇವೆಗಳ ಪ್ರಾಧಿಕಾರದ ರಾಘವೇಂದ್ರ ಎಸ್, ಕಾಂಗ್ರೆಸ್ ಜಿಲ್ಲಾ ಸಮಿತಿ ಉಪಾಧ್ಯಕ್ಷ ಪ್ರಖ್ಯಾತ ಶೆಟ್ಟಿ, ಜ್ಯೋತಿ ಹೆಬ್ಬಾರ್, ಕುಶಲ್ ಶೆಟ್ಟಿ ಇಂದ್ರಾಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮೂರ್ತಿ, ಮಹಾಬಲ ಕುಂದರ್ , ಕೇಶವ್ ಕೋಟ್ಯಾನ್, ಸದಾನಂದ್ ಕಾಂಚನ್, ಕೀರ್ತಿ ಶೆಟ್ಟಿ ಅಂಬಲಪಾಡಿ,ಅಬೀಬ್ ಅಲಿ, ಪ್ರಶಾಂತ್ ಜತ್ತನ್ ಮೊದಲಾದವರು ಉಪಸ್ಥಿತರಿದ್ದರು. ಸತೀಶ್ ಕೊಡವೂರು ಸ್ವಾಗತಿಸಿ, ಪ್ರಸ್ತಾವನೆಗೈದರು.


