-->
ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಕಾರ್ಮಿಕರ ಭದ್ರತೆಗೆ ಪ್ರಥಮ ಪ್ರಾಶಸ್ತ್ಯ: ಕೋಟ

ದೇಶವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಕಾರ್ಮಿಕರ ಭದ್ರತೆಗೆ ಪ್ರಥಮ ಪ್ರಾಶಸ್ತ್ಯ: ಕೋಟ


ದೇಶಾದ್ಯಂತ ಉದ್ಯೋಗ ಸೃಷ್ಟಿಗೆ ವೇಗ ನೀಡಲು, ವಿಶೇಷವಾಗಿ ಉತ್ಪಾದನಾ ಕ್ಷೇತ್ರದಲ್ಲಿ ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಮತ್ತು ವಿವಿಧ ವಲಯಗಳಲ್ಲಿ ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ವಿಸ್ತರಿಸುವ ಉದ್ದೇಶ ಹೊಂದಿರುವ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿಗೆ ಬೆಂಬಲ ನೀಡಿದೆ. ತನ್ನ ಮತ್ತು ನಾಳಿನ ಸಮಾಜದ ಭವಿಷ್ಯಕ್ಕಾಗಿ ದುಡಿಯುತ್ತಿರುವ ಕಾರ್ಮಿಕರ ಭದ್ರತೆಗೆ ಪ್ರಥಮ ಪ್ರಾಶಸ್ತ್ಯ ನೀಡುವ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು ಒಟ್ಟು 99,446 ಕೋಟಿ ರೂ ವೆಚ್ಚದ ಈ ಯೋಜನೆಯು ಎರಡು ವರ್ಷಗಳ ಅವಧಿಯಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.

ಅವರು ಮಣಿಪಾಲದ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

145 ಕೋಟಿ ಜನಸಂಖ್ಯೆಯ ಭಾರತದಲ್ಲಿ ಅಂಕಿ ಆಂಶಗಳ ಪ್ರಕಾರ 42 ಕೋಟಿ ಅಸಂಘಟಿತ ಕಾರ್ಮಿಕರು ದುಡಿಯುತ್ತಿದ್ದಾರೆ. ನಾನಾ ವೃತ್ತಿಗಳಲ್ಲಿರುವ 29 ಕೋಟಿ ಕಾರ್ಮಿಕರು ಇ-ಶ್ರಮ್ ಪೋರ್ಟಲ್ ನಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯದ ಕಾರ್ಮಿಕ ಇಲಾಖೆಗಳು ಸಂಘಟಿತ ಮತ್ತು ಅಸಂಘಟಿತ ಕ್ಷೇತ್ರದಲ್ಲಿ ದುಡಿಯುವ ಎಲ್ಲ ಕಾರ್ಮಿಕರಿಗೆ ಭದ್ರತೆ ನೀಡಲು ಬದ್ದವಾಗಿದೆ. ಪ್ರಧಾನಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆಯಡಿಯಲ್ಲಿ ಕಾರ್ಮಿಕರು ಮತ್ತು ಉದ್ಯೋಗದಾತರು ಇಬ್ಬರೂ ದೇಶದ ಆರ್ಥಿಕತೆಯನ್ನು ಪ್ರೋತ್ಸಾಹಿಸಿ ವಿಕಸಿತ ಭಾರತದ ಕನಸನ್ನು ನನಸಾಗಿಸುತ್ತಿದ್ದಾರೆ ಎಂದ ಅವರು, ಜಿಲ್ಲೆಯಲ್ಲಿ ಯೋಜನೆಯ ಭಾಗ (A) ನಲ್ಲಿ 774 ಉದ್ಯೋಗಿಗಳಿಗೆ 48,58,475 ರೂವರೆಗೆ ಪ್ರೋತ್ಸಾಹಧನ ಹಾಗೂ ಭಾಗ (B) ನಲ್ಲಿ 199 ಸಂಸ್ಥೆಗಳು 3.18 ಕೋಟಿ ರೂಗಳ ಪ್ರೋತ್ಸಾಹಧನವನ್ನು ನಗದೀಕರಿಸಿಕೊಂಡಿವೆ. ಆತ್ಮನಿರ್ಭರ ಭಾರತವನ್ನು ರೂಪಿಸುತ್ತಿರುವ ದುಡಿಯುವ ಕೈಗಳಿಗೆ ಈ ಯೋಜನೆ ಶಕ್ತಿ ತುಂಬಲಿದೆ. ಆತ್ಮನಿರ್ಭರತೆಯೊಂದಿಗೆ ವಿಕಸಿತ ಭಾರತವು ಎಲ್ಲ ರಂಗಗಳಲ್ಲೂ ಪ್ರಥಮ ರಾಷ್ಟ್ರವಾಗಿ ರೂಪುಗೊಳ್ಳಬೇಕು ಎಂದರು. 

ಪ್ರಸ್ತುತ 18 ಸಾವಿರದಿಂದ 30 ಸಾವಿರ ರೂ. ವರೆಗಿನ ವೇತನ ಹೊಂದಿದವರಿಗೆ ಮಾತ್ರ ಇ.ಎಸ್.ಐ ಸೌಲಭ್ಯ ದೊರೆಯುತ್ತಿದೆ ಆದರೆ ಇದನ್ನು 30 ಸಾವಿರ ವೇತನ ಹೊಂದಿದ ಉದ್ಯೋಗಿಗಳಿಗೂ ವಿಸ್ತರಿಸಬೇಕು ಎಂದು ಕೇಂದ್ರದ ಕಾರ್ಮಿಕ ಇಲಾಖೆಗೆ ಮನವಿ ಮಾಡಿದ್ದೇವೆ. 19 ಕೋಟಿ ಕಾರ್ಮಿಕರು ಈ ಯೋಜನೆಯ ಸೌಲಭ್ಯ ಪಡೆಯುತ್ತಿದ್ದು ಯೋಜನೆ ವಿಸ್ತರಣೆಗೊಂಡಲ್ಲಿ ಇನ್ನೂ ಹೆಚ್ಚಿನ ಜನರಿಗೆ ಸೌಲಭ್ಯ ದೊರೆಯಲಿದೆ  ಎಂದರು.

ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ನರೇಂದ್ರ ಮೋದಿಯವರು ದೇಶದ ನೇತೃತ್ವ ವಹಿಸಿದ ಬಳಿಕ ದೇಶದಲ್ಲಿ ಹಲವು ಮಹತ್ತರ ಬದಲಾವಣೆಗಳಾಗಿವೆ. ಅಂದಾಜು 1.92 ಕೋಟಿ ಫಲಾನುಭವಿಗಳು ಈ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ.  ಉದ್ಯೋಗಾಕಾಂಕ್ಷಿ ಯುವಕ ಮತ್ತು ಯುವತಿಯರಿಗೆ ಇದರಿಂದ ಪ್ರಯೋಜನ ಸಿಗಲಿದೆ. ಮೊದಲ ಬಾರಿಗೆ ಉದ್ಯೋಗಕ್ಕೆ ಸೇರುವ ಉದ್ಯೋಗಿಗಳು ಮೊದಲನೆ ತಿಂಗಳು 15,000 ರೂವರೆಗೆ ಪ್ರೋತ್ಸಾಹಧನ ಪಡೆದರೆ, ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುವ ಉದ್ಯೋಗದಾತರು ಪ್ರತಿ ಹೆಚ್ಚುವರಿ ಉದ್ಯೋಗಿಗೆ ತಿಂಗಳಿಗೆ 3,000 ರೂ ವರೆಗೆ ಪ್ರೋತ್ಸಾಹಧನ ಪಡೆಯುತ್ತಾರೆ. ಇಂತಹ ಪ್ರಯತ್ನ ದೇಶದಲ್ಲೇ ಪ್ರಪ್ರಥಮ ಬಾರಿಗೆ ನಡೆಯುತ್ತಿದೆ.  ಉದ್ಯೋಗಿಗಳು ಮತ್ತು ಉದ್ಯೋಗದಾತರು ಇಬ್ಬರನ್ನೂ ಬೆಂಬಲಿಸುವ ಮೂಲಕ ಈ ಯೋಜನೆಯು ಔಪಚಾರಿಕ ಉದ್ಯೋಗವನ್ನು ವಿಸ್ತರಿಸಿ, ಸಾಮಾಜಿಕ ಭದ್ರತೆಯ ವ್ಯಾಪ್ತಿಯನ್ನು ಬಲಪಡಿಸಿ ವಿಕಸಿತ ಭಾರತಕ್ಕೆ ಸಹಕಾರಿಯಾಗಲಿದೆ. ಅಧಿಕಾರಿಗಳು ಪ್ರಾಮಾಣಿಕತೆಯಿಂದ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿದಲ್ಲಿ ಯೋಜನೆಯು ಸಫಲತೆಯನ್ನು ಪಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜಗಾರ್ ಯೋಜನೆ  ಅಡಿಯಲ್ಲಿ ಸುಮಾರು 2,400 ಕೋಟಿ ರೂ ಮೌಲ್ಯದ ಪ್ರೋತ್ಸಾಹಧನವನ್ನು ಫಲಾನುಭವಿಗಳಿಗೆ ವಿತರಿಸಿದರು.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಇ.ಪಿ.ಎಫ್.ಒ ಪ್ರಾದೇಶಿಕ ಆಯುಕ್ತ ಶಶಿಕಾಂತ್ ದಹಿಯಾ, ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಎಚ್.ಕೆ ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ನೀತಾ ಉದಯಶಂಕರ್, ಜಯಶ್ರೀ ನಿರೂಪಿಸಿ, ವನಿತಾ ನಾಯ್ಕ್ ವಂದಿಸಿದರು.

Ads on article

Advertise in articles 1

advertising articles 2

Advertise under the article