ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಗಲಾಟೆ ಪ್ರಕರಣ: ಓರ್ವನ ಬಂಧನ
ಉಡುಪಿಯ ಶ್ರೀ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿ ರಾತ್ರಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿಯ ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕುಮಾರ್ (40) ಬಂಧಿತ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ನಗರ ಠಾಣೆಯಲ್ಲಿ ದೂರು- ಪ್ರತಿ ದೂರು ದಾಖಲಾಗಿದೆ.
ತೆಲಂಗಾಣ ರಾಜ್ಯದ ಹೈದರಾಬಾದ್ ನಿವಾಸಿ ರಂಗ ರಾವ್ ಅವರು ಕುಟುಂಬ ಸದಸ್ಯರೊಂದಿಗೆ ಶ್ರೀ ಕೃಷ್ಣ ಮಠಕ್ಕೆ ದರ್ಶನಕ್ಕೆ ಆಗಮಿಸಿದ್ದರು. ಈ ವೇಳೆ ಕಾರು ನಿಲ್ಲಿಸಿ ರಸ್ತೆ ದಾಟುತ್ತಿದ್ದಾಗ ಸ್ಥಳೀಯ ನಿವಾಸಿ ಸುಪ್ರೀತ್ ಕುಮಾರ್ ಅವರು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ಉಂಟಾಗಿದೆ. ಅಲ್ಲದೇ ಪ್ರವಾಸಿಗರು ಸುಪ್ರೀತ್ ಕಾರಿನ ಮೇಲೆ ಹೊಡೆದಿದ್ದಾರೆ. ಆಕ್ರೋಶಗೊಂಡ ಸುಪ್ರೀತ್ ಕೋಲಿನಿಂದ ಹಲ್ಲೆ ನಡೆಸಿದ್ದರು. ಆಂದ್ರ ಮೂಲದ ಪ್ರವಾಸಿಗರು ಹಾಗೂ ಸುಪ್ರೀತ್ ಹೊಡೆದಾಡಿಕೊಂಡಿದ್ದರು. ಸ್ಥಳೀಯರು ಮಧ್ಯಪ್ರವೇಶಿಸಿ ತಡೆದು, ಗಲಾಟೆ ಬಿಡಿಸಿದ್ದರು. ಈ ಬಗ್ಗೆ ಆಂಧ್ರದ ರಂಗ ರಾವ್ ದೂರಿನ ಮೇರೆಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 71/2026ರಡಿ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ, ಕೊರಂಗ್ರಪಾಡಿ ನಿವಾಸಿ ಸುಪ್ರೀತ್ ಕುಮಾರ್ ಕೂಡಾ ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 72/2026ರಡಿ ಪ್ರತಿದೂರು ದಾಖಲಾಗಿದೆ.
ಪೊಲೀಸರು ತನಿಖೆ ಮುಂದುವರಿಸಿದ್ದು, ಒಂದು ಪ್ರಕರಣದ ಆರೋಪಿ ಸುಪ್ರೀತ್ ಕುಮಾರ್ ಅವರನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.