-->
ಉಡುಪಿಯಲ್ಲಿ ನಡೆಯುವ ಪ್ರತೀ ಕಾರ್ಯಕ್ರಮದಲ್ಲೂ ಸಂಸ್ಕೃತಿಯ ಬಾಂಧವ್ಯವಿದೆ: ಎಸ್ಪಿ ಹರಿರಾಂ ಶಂಕರ್

ಉಡುಪಿಯಲ್ಲಿ ನಡೆಯುವ ಪ್ರತೀ ಕಾರ್ಯಕ್ರಮದಲ್ಲೂ ಸಂಸ್ಕೃತಿಯ ಬಾಂಧವ್ಯವಿದೆ: ಎಸ್ಪಿ ಹರಿರಾಂ ಶಂಕರ್


ಉಡುಪಿ ಜಿಲ್ಲೆಯ ಜನರು ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮದಲ್ಲೂ ಇಲ್ಲಿನ ಮಣ್ಣಿನ, ಸಂಸ್ಕೃತಿ ಹಾಗೂ ಪದ್ಧತಿಗಳೊಂದಿಗೆ ಗಾಢವಾದ ಬಾಂಧವ್ಯ ಕಾಣಿಸುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅಭಿಪ್ರಾಯಪಟ್ಟರು.

ಬೆಂಗಳೂರಿನ ಸ್ಪಂದನ ಸೇವಾ ಸಂಸ್ಥೆಯ ವತಿಯಿಂದ ಕಲ್ಯಾಣಪುರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ವಿಜಯ ಕರ್ನಾಟಕ ಉಡುಪಿ ಜಿಲ್ಲಾ ವರದಿಗಾರರಾದ ಸುಬ್ರಮಣ್ಯ ಜಿ. ಕುರ್ಯ ಅವರಿಗೆ “ಯಶೋ ಮಾಧ್ಯಮ–2026” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹರಿರಾಮ್ ಶಂಕರ್, “ಉಡುಪಿಯಲ್ಲಿ ನಡೆಯುವ ಹೆಚ್ಚಿನ ಕಾರ್ಯಕ್ರಮಗಳು ಸಣ್ಣದಾಗಲಿ, ದೊಡ್ಡದಾಗಲಿ ಅರ್ಥಪೂರ್ಣತೆಯಿಂದ ಕೂಡಿರುತ್ತವೆ. ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಿಸುವಂತಹ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸಂತಸದ ಸಂಗತಿ. ಹಿರಿಯ ಪತ್ರಕರ್ತರನ್ನು ಸನ್ಮಾನಿಸುವ ಅವಕಾಶ ದೊರೆತಿರುವುದು ನನ್ನ ಭಾಗ್ಯ. ಸ್ಪಂದನ ಸೇವಾ ಸಂಸ್ಥೆಗೆ ಇಂತಹ ಅರ್ಥಪೂರ್ಣ ಕಾರ್ಯಗಳನ್ನು ಮುಂದುವರಿಸಲು ಇನ್ನಷ್ಟು ಶಕ್ತಿ ದೊರೆಯಲಿ” ಎಂದು ಹಾರೈಸಿದರು.

ಪತ್ರಕರ್ತ ಜನಾರ್ದನ ಕೊಡವೂರು ಮಾತನಾಡಿ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವುದರ ಜೊತೆಗೆ ಜಿಲ್ಲೆಯ ಪತ್ರಕರ್ತರಿಗೆ “ಯಶೋ ಮಾಧ್ಯಮ–2026” ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಅಲ್ಲದೆ ಶ್ರೀವೆಂಕಟರಮಣ ದೇವಸ್ಥಾನದ ನೂತನ ಆಡಳಿತ ಮಂಡಳಿಯನ್ನು ಸನ್ಮಾನಿಸಿರುವುದು ಉತ್ತಮ ಬೆಳವಣಿಗೆ ಎಂದರು.

ಪ್ರಶಸ್ತಿ ಪುರಸ್ಕೃತ ಸುಬ್ರಮಣ್ಯ ಜಿ. ಕುರ್ಯ ಅವರು ಪ್ರಶಸ್ತಿಗೆ ಆಯ್ಕೆ ಮಾಡಿದ ಸ್ಪಂದನ ಸೇವಾ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಶ್ರೀವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ರಾಮರಾಯ್ ಕಿಣಿ ಮಾತನಾಡಿ, ಸ್ಪಂದನ ಸೇವಾ ಸಂಸ್ಥೆಯು ಕಳೆದ ಸುಮಾರು 18 ವರ್ಷಗಳಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ನಡೆಸುತ್ತಿದ್ದು, ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ, ಗಿಡ ನೆಡುವ ಕಾರ್ಯಕ್ರಮಗಳ ಮೂಲಕ ಸಮಾಜಮುಖಿ ಸೇವೆ ಸಲ್ಲಿಸುತ್ತಿದೆ ಎಂದು ಶ್ಲಾಘಿಸಿದರು. ದೇವಸ್ಥಾನದ ನೂತನ ಆಡಳಿತ ಮಂಡಳಿಯ ಸದಸ್ಯರನ್ನು ಸನ್ಮಾನಿಸಿದಕ್ಕಾಗಿ ಸಂಸ್ಥೆಗೆ ಧನ್ಯವಾದ ಅರ್ಪಿಸಿದರು.

ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ಸುಬ್ರಮಣ್ಯ ಕಾರಂತ್, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್‌ನ ಸಹಾಯಕ ಪ್ರಾಧ್ಯಾಪಕಿ ಡಾ. ಮರಿಯಾ ಪಾಯಸ್, ಕಲ್ಯಾಣಪುರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೃಷ್ಣ ದೇವಾಡಿಗ ಸೇರಿದಂತೆ ಹಲವರು ಸ್ಪಂದನ ಸೇವಾ ಸಂಸ್ಥೆಯ ಕಾರ್ಯಚಟುವಟಿಕೆಗಳ ಕುರಿತು ಮಾತನಾಡಿದರು.

ಪರಿಸರ ದಿನಾಚರಣೆಯ ಅಂಗವಾಗಿ ರಾಘವೇಂದ್ರ ಪ್ರಭು ಕರ್ವಾಲು ಅವರ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ಇದೇ ಸಂದರ್ಭದಲ್ಲಿ ಜಿ.ಎಸ್.ಬಿ. ಸಮುದಾಯದ ರುದ್ರಭೂಮಿ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಮಾಜಸೇವಕ ಪ್ರಕಾಶ್ ಕಾಮತ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸುಮನ ಪೈ, ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ಪೈ, ಖಜಾಂಚಿ ರಜನಿ ವಿ. ಪೈ, ಮುಖ್ಯೋಪಾಧ್ಯಾಯ ಸಂತೋಷ್ ಕುಮಾರ್ ಶೆಟ್ಟಿ, “ಯೂತ್ ಆಫ್ ಜಿ.ಎಸ್.ಬಿ.” ಸದಸ್ಯ ಅಜಿತ್ ಪೈ, ಶಿಕ್ಷಕ ವೃಂದ, ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವೆಂಕಟೇಶ್ ಪೈ ಸ್ವಾಗತಿಸಿದರು. ಸಂತೋಷ್ ಕಾಮತ್ ವಂದಿಸಿದರು.

Ads on article

Advertise in articles 1

advertising articles 2

Advertise under the article