ಬಿ.ಟಿ.ರಂಜನ್ ಸ್ಮರಣಾರ್ಥ ಅತ್ಯುತ್ತಮ ಪತ್ರಿಕಾ ವರದಿಗೆ ವಾರ್ಷಿಕ ಪ್ರಶಸ್ತಿ: ಜು. 11ರೊಳಗೆ ಅರ್ಜಿ ಆಹ್ವಾನ
ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಹಿರಿಯ ಪತ್ರಕರ್ತ ಬಿ.ಟಿ. ರಂಜನ್ ಅವರ ಸ್ಮರಣಾರ್ಥ ಅತ್ಯುತ್ತಮ ಮಾನವಾಸಕ್ತಿಯ ಪತ್ರಿಕಾ ವರದಿಗೆ ವಾರ್ಷಿಕ 'ಬಿ.ಟಿ. ರಂಜನ್ ಪ್ರಶಸ್ತಿ' ನೀಡಲು ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ನಿರ್ಧರಿಸಿದೆ.
ಪ್ರಶಸ್ತಿಯನ್ನು ಜುಲೈ 18ರಂದು ಪುತ್ತೂರು ಪತ್ರಿಕಾ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿ ಗೌರವಿಸಲಾಗುವುದು.
ಪುತ್ತೂರು ಉಪವಿಭಾಗ ವ್ಯಾಪ್ತಿಯ ಪುತ್ತೂರು, ಕಡಬ, ಸುಳ್ಯ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರು 2025ರ ಜನವರಿ 1ರಿಂದ ಡಿಸೆಂಬರ್ 31ರವರೆಗೆ ತಮ್ಮ ಬೈಲೈನ್‌ನಲ್ಲಿ ಪ್ರಕಟವಾದ ಮಾನವಾಸಕ್ತಿಯ ವರದಿಗಳನ್ನು ಪ್ರಶಸ್ತಿಗೆ ಸಲ್ಲಿಸಬಹುದು. ಆಯ್ಕೆ ಸಮಿತಿ ವರದಿಗಳನ್ನು ಪರಿಶೀಲಿಸಿ ಅತ್ಯುತ್ತಮ ವರದಿಯನ್ನು 2026ನೇ ಸಾಲಿನ ಬಿ.ಟಿ. ರಂಜನ್ ಪ್ರಶಸ್ತಿಗೆ ಆಯ್ಕೆ ಮಾಡಲಿದೆ.
ಆಸಕ್ತ ಪತ್ರಕರ್ತರು 2025ರಲ್ಲಿ ಪ್ರಕಟವಾದ ತಮ್ಮ ಬೈಲೈನ್ ಹೊಂದಿರುವ ಮಾನವಾಸಕ್ತಿಯ ವರದಿಗಳ ಎರಡು ಪ್ರತಿಗಳನ್ನು, ಸಂಬಂಧಿತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ದೃಢೀಕರಣ ಪತ್ರದೊಂದಿಗೆ ಜುಲೈ 11ರೊಳಗೆ ಅಧ್ಯಕ್ಷರು, ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಪತ್ರಿಕಾ ಭವನ, ಪುತ್ತೂರು ಎಂಬ ವಿಳಾಸಕ್ಕೆ ಕಳುಹಿಸಬೇಕು. ಒಬ್ಬ ಪತ್ರಕರ್ತರು ಒಂದಕ್ಕಿಂತ ಹೆಚ್ಚು ವರದಿಗಳನ್ನು ಸಲ್ಲಿಸಲು ಅವಕಾಶವಿದೆ.
ಈ ಕುರಿತು ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ಹಾಗೂ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಸುಮಾರು ನಾಲ್ಕು ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದ ಬಿ.ಟಿ. ರಂಜನ್ ಅವರು ಮೂಲತಃ ಉಪ್ಪಿನಂಗಡಿಯವರಾಗಿದ್ದು, ಮಂಗಳೂರು ಮಿತ್ರ, ಉದಯವಾಣಿ ಹಾಗೂ ಹೊಸದಿಗಂತ ಪತ್ರಿಕೆಗಳಲ್ಲಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಅವರು ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ, ಡಾ. ಶಿವರಾಮ ಕಾರಂತ ಬಾಲವನ ಮಾಧ್ಯಮ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. 2022ರ ಫೆಬ್ರವರಿ 5ರಂದು ಅವರು ನಿಧನರಾಗಿದ್ದರು.
ಅವರ ನಾಯಕತ್ವ, ಪತ್ರಿಕೋದ್ಯಮಕ್ಕೆ ನೀಡಿದ ಸುದೀರ್ಘ ಸೇವೆ ಹಾಗೂ ಕೊಡುಗೆಯನ್ನು ಶಾಶ್ವತವಾಗಿ ಸ್ಮರಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಆರಂಭಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.