-->
 ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: 160 ಕ್ವಿಂಟಾಲ್ ಅಕ್ಕಿ, ಲಾರಿ ವಶ

ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: 160 ಕ್ವಿಂಟಾಲ್ ಅಕ್ಕಿ, ಲಾರಿ ವಶ


ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಕೋಟ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪತ್ತೆಹಚ್ಚಿದ್ದಾರೆ.

ಆಹಾರ ನಿರೀಕ್ಷಕ ವಸಂತ ಕುಮಾರ್ ಅವರಿಗೆ ಜುಲೈ 28ರಂದು ಬೆಳಿಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಕುಮಾರ್ ಹಾಗೂ ಸಿಬ್ಬಂದಿಯೊಂದಿಗೆ ಬ್ರಹ್ಮಾವರ ತಾಲೂಕಿನ ಮಣೂರು ಗ್ರಾಮದ ಮಹಾಲಕ್ಷ್ಮೀ ಹೋಟೆಲ್ ಎದುರು ದಾಳಿ ನಡೆಸಲಾಯಿತು.

ದಾಳಿಯ ವೇಳೆ KA-47-5533 ಸಂಖ್ಯೆಯ ಅಶೋಕ್ ಲೇಲ್ಯಾಂಡ್ ಲಾರಿಯಲ್ಲಿ ಸರ್ಕಾರದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ತನಿಖೆಯಲ್ಲಿ ಶ್ರೀ ಗಣೇಶ್ ರೈಸ್ ಇಂಡಸ್ಟ್ರೀಸ್, ನಾಡಮಸ್ಕಿರಿ (ಕುಮಟಾ) ಮಾಲೀಕ ನಾಗರಾಜ್ ನಾಯ್ಕ್ ಅವರು ಅಕ್ಕಿಯನ್ನು ಲಾರಿಗೆ ತುಂಬಿಸಿದ್ದು, ಕೇರಳದ ಕಾಸರಗೋಡು ಜಿಲ್ಲೆಯ ಶಾಜಿ ಟ್ರೆಡಿಂಗ್ ಕಂಪನಿಗೆ ಸಾಗಿಸಲು ಲಾರಿ ಮಾಲೀಕ ಗಿರೀಶ್ ನಾಯ್ಕ್ ಸೂಚನೆ ನೀಡಿರುವುದಾಗಿ ಚಾಲಕ ಕೆ. ನರಸಿಂಹ ಒಪ್ಪಿಕೊಂಡಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಮಾರು 320 ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ್ದ 160 ಕ್ವಿಂಟಾಲ್ ಅನ್ನಭಾಗ್ಯ ಅಕ್ಕಿ (ಅಂದಾಜು ಮೌಲ್ಯ ₹3.84 ಲಕ್ಷ) ಹಾಗೂ ₹3.50 ಲಕ್ಷ ಮೌಲ್ಯದ ಲಾರಿ ಸೇರಿ ಒಟ್ಟು ₹7.34 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಆಹಾರ ನಿರೀಕ್ಷಕ ವಸಂತ ಕುಮಾರ್ ನೀಡಿದ ದೂರಿನ ಮೇರೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Ads on article

Advertise in articles 1

advertising articles 2

Advertise under the article